

ಭಾಲ್ಕಿ: ಬೀದರ್ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ನಿರೀಕ್ಷೆಯಂತೆ ನೂತನ, ಯುವ ಸಂಸದ ಸಾಗರ ಖಂಡ್ರೆ ಅವರು ಕೆಲಸ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ನೂತನ ಸಂಸದ ಸಾಗರ ಖಂಡ್ರೆ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೂಜ್ಯರ, ಜನರ ಆಶೀರ್ವಾದ, ಹಿರಿಯರ ಹಾರೈಕೆಯಿಂದ ಸಾಗರ ಖಂಡ್ರೆ ಸಂಸದರಾಗಿ ಆಯ್ಕೆ ಆಗಿದ್ದಾರೆ. ಅವರು ಮುಂದಿನ ಐದು ವರ್ಷ ಕೇಂದ್ರದಲ್ಲಿ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಖಂಡ್ರೆ ಮನೆತನ ಸಂಸ್ಕಾರಯುತ ಮನೆತನವಾಗಿದೆ. ಹೀಗಾಗಿ ಈ ಮನೆತನದ ಮೂರನೇ ತಲೆಮಾರಿನ ಸಾಗರ ಖಂಡ್ರೆ ಅವರು ಉತ್ತಮ ಸಂಸ್ಕಾರ, ಚಾರಿತ್ರ್ಯ ಮೈಗೂಡಿಸಿಕೊಂಡಿರುವ ಪರಿಣಾಮ ಇಂದು ಸಂಸದರಾಗಿ ಆಯ್ಕೆ ಆಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿದ ನೂತನ ಸಂಸದ ಸಾಗರ ಖಂಡ್ರೆ ಮಾತನಾಡಿ, ಪೂಜ್ಯರು ಮತ್ತು ಮತದಾರರ ಆಶೀರ್ವಾದದಿಂದ ಸಂಸದನಾಗಿ ಆಯ್ಕೆಯಾಗಿದ್ದಾನೆ. ನಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಜನರಿಗೆ ಒಳ್ಳೆಯ ಸೇವೆ ನೀಡುವುದಾಗಿ ಹೇಳಿದರು.
ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ್, ಪ್ರಮುಖರಾದ ಸಂಗಮೇಶ ಹುಣಜೆ ಮದಕಟ್ಟಿ, ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ್ ಇತರರಿದ್ದರು. ಬಾಬು ಬೆಲ್ದಾಳ ನಿರೂಪಣೆ ಮಾಡಿ ವಂದಿಸಿದರು.
ನೂತನ ಸಂಸದರಾಗಿ ಆಯ್ಕೆ ಆಗಿರುವ ಸಾಗರ ಖಂಡ್ರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಡಾ.ಗೀತಾ ಖಂಡ್ರೆ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.
ಕೇಂದ್ರ ಸರ್ಕಾರ ಬುದ್ಧ, ಮಹಾವೀರ ಜಯಂತಿ ಆಚರಿಸುವಂತೆ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಕೇಂದ್ರ ಸರ್ಕಾರದಿಂದ ಆಚರಿಸಲು ನೂತನ ಸಂಸದರಾಗಿರುವ ಸಾಗರ ಖಂಡ್ರೆ ಅವರು ಮುಂಬರುವ ದಿನಗಳಲ್ಲಿ ಕೇಂದ್ರದ ಮೇಲೆ ಒತ್ತಡ ತರಲಿ.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ