

ಭಾಲ್ಕಿ: ತಾಲೂಕಿನಲ್ಲಿ ಸತತ ಐದು ದಿನಗಳಿಂದ ಸುರಿದ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಬುಧವಾರ ಸಂಸದ ಸಾಗರ್ ಖಂಡ್ರೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಪಲಾಪುರ, ನಾವದಗಿ, ಏಕಲಾಸಪುರ ವಾಡಿ, ಕೊಟಗೀರಾ, ಮದಕಟ್ಟಿ ಗ್ರಾಮಗಳಿಗೆ ಭೇಟಿ ನೀಡಿದ ಭಾಗಶಃ ಮನೆ ಕುಸಿದಿರುವ ಮನೆಗಳ ಮಾಲೀಕರಿಗೆ ಸರ್ಕಾರದ ಸಹಾಯ ಧನದ ಪತ್ರ ವಿತರಿಸಿ ಮಾತನಾಡಿದ ಸಂಸದರು, ಸರ್ಕಾರದಿಂದ ವಾರದಲ್ಲಿ ಭಾಗಶಃ ಮನೆ ಕುಸಿದಿರುವ ಯಜಮಾನರ ಖಾತೆಗೆ ಮೂವತ್ತು ಸಾವಿರ ರೂ. ಹಣ ಜಮೆ ಆಗುತ್ತದೆ ಎಂದು ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ನಡೆಸಿ ಸಹಾಯ ನೀಡಲು ಪ್ರಯತ್ನಿಸಲಾಗುವುದು. ಮಳೆಯ ಹಾನಿಯ ಸಂಪೂರ್ಣ ಮಾಹಿತಿ ಕಲೆ ಹಾಕಿ ಸರ್ಕಾರದಿಂದ ದೊರೆಯುವ ಎಲ್ಲ ರೀತಿಯ ಪರಿಹಾರವನ್ನು ಸಾರ್ವಜನಿಕರಿಗೆ, ರೈತರಿಗೆ ದೊರೆಯುವಂತೆ ನೋಡಿಕೊಳ್ಳಬೇಕು. ಇನ್ನು ಹೆಚ್ಚಿನ ಮಳೆಯಿಂದ ರಸ್ತೆ, ಸೇತುವೆ ಹಾನಿ ಕುರಿತು ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕು. ಒಟ್ಟಿನಲ್ಲಿ ಸಾಮಾನ್ಯ ಜನರಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ್ ಇತರತರಿದ್ದರು.