

ಭಾಲ್ಕಿ: ಇಷ್ಟಲಿಂಗವನ್ನು ಶ್ರದ್ದೆ, ಭಕ್ತಿಯಿಂದ ಪೂಜಿಸಿದರೆ ನೆಮ್ಮದಿಯ ಜೀವನದ ಜತೆಗೆ ದೇವನ ಸಾಮೀಪ್ಯಕ್ಕೆ ಕೊಂಡೊಯ್ಯುಲು ಸಾಧ್ಯವಾಗುತ್ತದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಕದಲಾಬಾದ್ ಗ್ರಾಮದ ಬಸವ ಮಂಟಪದಲ್ಲಿ ಶ್ರಾವಣ ಮಾಸದ ಬಸವ ದರ್ಶನ ಪ್ರವಚನ ಸಮಾಪ್ತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಮತ್ತು ಪೂಜಾ ವಿಧಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಶ್ರೀಗಳು, ವಿಶ್ವಗುರು ಬಸವಣ್ಣನವರು ಕರುಣಿಸಿದ ಇಷ್ಟಲಿಂಗವನ್ನು ಪ್ರತಿಯೊಬ್ಬ ಲಿಂಗಾಯತನು ಅಂಗದ ಮೇಲೆ ಧರಿಸಬೇಕು. ಇಂದಿನ ಆಧುನಿಕತೆಯಲ್ಲಿ ಯುವಶಕ್ತಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಇಷ್ಟಲಿಂಗದ ಮಹತ್ವ ಅರಿಯದೇ ಅನೇಕ ದುಶ್ಚಟಗಳಿಗೆ ಬಲಿಯಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದೆ ಆತಂಕ ವ್ಯಕ್ತಪಡಿಸಿದರು.
ಸಾಮೂಹಿಕ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು, ಹಿರಿಯರು ಸೇರಿ ನೂರಾರು ಭಕ್ತರು ದೀಕ್ಷೆ ಪಡೆದರು. ಬಸವ ಗುರುವಿನ ಪೂಜೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪೂಜ್ಯರು ಇಷ್ಟಲಿಂಗಕ್ಕೆ ಸಂಸ್ಕಾರ ನೀಡಿ ಭಕ್ತರ ಹಣೆಗೆ ಭಸ್ಮ ಧಾರಣೆ ನೆರವೇರಿಸಿ ಹೂವು, ಪತ್ರಿ ಅರ್ಪಿಸಿ ಇಷ್ಟಲಿಂಗ ಕೈಯಲಿಟ್ಟು ಆರತಿ ಬೆಳಗಿಸಿ ಪುಷ್ಪವೃಷ್ಟಿ ಸುರಿದು ಇಷ್ಟಲಿಂಗದ ಜತೆಗೆ ಲಗ್ನ ಮಾಡಿಸಿ ಮಂತ್ರ ಉಪದೇಶಿಸಿ ವಿಧಿ ವಿಧಾನ ತಿಳಿಸಿಕೊಟ್ಟರು.
ಗ್ರಾಮದ ಅಣ್ಣನ ಬಳಗ, ಅಕ್ಕನ ಬಳಗದ ಸದಸ್ಯರು ಇದ್ದರು.
ಬಸವ ದರ್ಶನದ ಪ್ರವಚನದ ಮೂಲಕ ಬಸವಾದಿ ಶರಣರ ಚರಿತ್ರೆಯನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಎಲ್ಲರೂ ಪ್ರವಚನದ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸಬೇಕು.
| ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ