

ಭಾಲ್ಕಿ: ಬಸವಣ್ಣನವರ ಸಮಕಾಲೀನ ಶರಣ ಹೂಗಾರ ಮಾದಣ್ಣ ಅನುಭವ ಮಂಟಪದಲ್ಲಿ ಎಲ್ಲ ಶರಣರ ಜತೆ ಅನುಭಾವ ಮಾಡಿದವರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ೪೮೦ನೆಯ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಶರಣ ಹೂಗಾರ ಮಾದಣ್ಣ ಸ್ಮರಣೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಪ್ರತಿನಿತ್ಯ ಬೆಳಗ್ಗೆ ಹೂಗಾರ ಮಾದಣ್ಣನವರು ಶಿವಶರಣರ ಮನೆಗೆ ಹೂ ಮತ್ತು ಬಿಲ್ವಪತ್ರಿ ವಿತರಿಸುವ ಕಾಯಕ ಮಾಡುತ್ತ ಸುವಿಚಾರಗಳಿಂದ ಎಲ್ಲರ ಮನಸ್ಸುಗಳನ್ನು ಅರಳಿಸಿದ ಶರಣರು ಎಂದು ಬಣ್ಣಿಸಿದರು.
ಕಾಯಕ ಮತ್ತು ದಾಸೋಹ ತತ್ವದಲ್ಲಿ ಅತ್ಯಂತ ಶ್ರದ್ಧೆ ಇಟ್ಟುಕೊಂಡಿದ್ದ ಹೂಗಾರ ಮಾದಣ್ಣನವರ ಪತ್ನಿ ಮಹಾದೇವಿ ಪತಿಗೆ ತಕ್ಕ ಸತಿಯಾಗಿದ್ದಳು. ಸಕಲೇಶ ಮಾದರಸರಿಂದ ಇಷ್ಟಲಿಂಗ ದೀಕ್ಷೆ ಪಡೆದು ಲಿಂಗಾನುಭವ ಸಾಧಿಸಿದ ಮಹಾಶರಣ ಹೂಗಾರ ಮಾದಣ್ಣ ಜೀವನ ಚರಿತ್ರೆ ಜನಪದ ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಿದೆ ಎಂದರು.
ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ, ಮನೋಹರ ಫುಲಾರಿ ಅಧ್ಯಕ್ಷತೆ ವಹಿಸಿದ್ದರು. ರಾಜಕುಮಾರ ಹೂಗಾರ ಶ್ರೀಮಂಡಲ ಅನುಭಾವ ನೀಡಿದರು. ಸಂತೋಷ ಮಾಲಗಾರ ಗ್ರಂಥ ಪಠಣ ಮಾಡಿದರು. ಜಯಪ್ರಕಾಶ ಮಾಲಗಾರ, ವಿಠಲ ಹೂಗಾರ, ವೀರಣ್ಣ ಹೂಗಾರ, ಬಸವರಾಜ ಹೂಗಾರ, ಶಿವಕುಮಾರ ಹೂಗಾರ, ಜಗದೀಶ ಡೋಣಗಾಪುರೆ ಇತರರಿದ್ದರು.
ರಾಜಕುಮಾರ ಹೂಗಾರ ವಚನ ಸಂಗೀತ ನಡೆಸಿಕೊಟ್ಟರು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ರವಿ ಹೂಗಾರ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಿ ಆಶೀರ್ವದಿಸಲಾಯಿತು.
ಶರಣ ಹೂಗಾರ ಮಾದಣ್ಣನವರು ಸತ್ಯ ಶುದ್ಧ ಕಾಯಕದ ಮೂಲಕ ಶ್ರೇಷ್ಠ ಶರಣರಾಗಿ ಗುರುತಿಸಿಕೊಂಡಿದ್ದರು. ಅವರ ಆದರ್ಶ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ