ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ

7blk1 3
ಭಾಲ್ಕಿ ತಾಪಂ ಸಭಾಂಗಣದಲ್ಲಿ ಮಂಗಳವಾರ ಸಂತ್ರಸ್ತ ಕೃಷಿಕ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪರಿಹಾರ ಧನದ ಚೆಕ್ ವಿತರಿಸಿದರು.
Published on

ಭಾಲ್ಕಿ: ರೈತರು ಯಾವ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಆತ್ಮಹತ್ಯೆ ಯಾವುದೇ ಸಮಸ್ಯೆಗಳಿಗೆ ಪರಿಹಾರವಲ್ಲ. ಸಮಸ್ಯೆ ಬಗೆಹರಿಸಲು ಸರ್ಕಾರ ನಿಮ್ಮೊಂದಿಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ಮಂಜೂರಾದ ಪರಿಹಾರ ಧನದ ಚೆಕ್‌ಗಳನ್ನು ೧೮ ಸಂತ್ರಸ್ತರಿಗೆ ವಿತರಿಸಿದ ಅವರು, ಪ್ರತಿವರ್ಷ ರೈತರು ಅತಿವೃಷ್ಟಿ ಇಲ್ಲವೆ ಅನಾವೃಷ್ಟಿಗೆ ಸಿಲುಕಿ ಸಂಕಷ್ಟದಲ್ಲಿದ್ದಾರೆ. ಬೆಳೆ ಸರಿಯಾಗಿ ಬೆಳೆದರೆ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಒಂದಿಲ್ಲೊಂದು ಸಮಸ್ಯೆಯಿಂದ ರೈತರು ಇನ್ನಿಲ್ಲದ ಸಂಕಟ ಎದುರಿಸುತ್ತಿದ್ದಾರೆ. ಬಿತ್ತನೆ, ಉಳುಮೆಗೆ ಸಾಕಷ್ಟು ಹಣ ಖರ್ಚು ಮಾಡಿ ಸಾಲದ ಹೊರೆ ತಾಳದೆ ಆತ್ಮಹತ್ಯೆ ದಾರಿ ತುಳಿಯುತ್ತಿರುವುದು ಆತಂಕದ ವಿಷಯ. ಎಲ್ಲದಕ್ಕೂ ಆತ್ಮಹತ್ಯೆ ಪರಿಹಾರವಲ್ಲ. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಧೈರ್ಯ ತುಂಬಿದರು.

ಸರ್ಕಾರ ಬೆಳೆನಷ್ಟ ಪರಿಹಾರ, ಬೆಳೆವಿಮೆ, ಶೂನ್ಯ ಬಡ್ಡಿದರದಲ್ಲಿ ೫ ಲಕ್ಷ ರೂ.ವರೆಗೆ ಸಾಲ ಸೇರಿ ವಿವಿಧ ಯೋಜನೆಗಳನ್ನು ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದಿದ್ದು, ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ತಾಪಂ ಇಒ ಸೂರ್ಯಕಾಂತ ಬಿರಾದಾರ, ಎಡಿ ಚಂದ್ರಶೇಖರ ಬನ್ನಾಳೆ, ಜಿಪಂ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್, ಕೃಷಿ ಎಡಿ ಪಿ.ಎಂ. ಮಲ್ಲಿಕಾರ್ಜುನ, ರೇವಣಸಿದ್ದಯ್ಯ ಸ್ವಾಮಿ, ಸಂಜೀವ ಮೇತ್ರೆ ಇತರರಿದ್ದರು.

ತಾಲೂಕಿನಲ್ಲಿ ಮೃತಪಟ್ಟ ರೈತರ ೧೩ ಕುಟುಂಬ ಸದಸ್ಯರಿಗೆ ತಲಾ ೫ ಲಕ್ಷ ರೂ. ಸೇರಿ ಹಾವು ಕಡಿತ ಮತ್ತು ಆಕಸ್ಮಿಕವಾಗಿ ಮೃತಪಟ್ಟ ಐವರ ಕುಟುಂಬಕ್ಕೆ ತಲಾ ೨ ಲಕ್ಷ ರೂ. ಸೇರಿ ೭೫ ಲಕ್ಷ ರೂ. ಮೊತ್ತದ ಚೆಕ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net