ಶರಣ ಸಂಸ್ಕೃತಿ ಬಿತ್ತುವಲ್ಲಿ ಪ್ರವಚನ ಸಹಕಾರಿ

23blk1
ಭಾಲ್ಕಿಯಲ್ಲಿ ಸೋಮವಾರ ಕರೆದಿದ್ದ ಶ್ರಾವಣ ಮಾಸದ ಪೂರ್ವಭಾವಿ ಸಭೆಯಲ್ಲಿ ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ನಿರ್ಮಲಾ ಚಂದ್ರಕಾಂತ ಪಾಟೀಲ್ ದಂಪತಿಯನ್ನು ಶ್ರೀ ಗುರುಬಸವ ಪಟ್ಟದ್ದೇವರು ಸನ್ಮಾನಿಸಿ ಆಶೀರ್ವದಿಸಿದರು. ಪ್ರೊ.ಶಂಭುಲಿಂಗ ಕಾಮಣ್ಣ, ಮಲ್ಲಮ್ಮ ಆರ್.ಪಾಟೀಲ್, ಬಸವರಾಜ ಮರೆ, ಚಂದ್ರಕಾಂತ ಪಾಟೀಲ್, ಮಹಾನಂದ ದೇಶಮುಖ, ಶರಣಪ್ಪ ಬಿರಾದಾರ, ಶಿಖರೇಶ್ವರ ಶಟಕಾರ ಇತರರಿದ್ದರು.
Published on

ಭಾಲ್ಕಿ: ಮನುಷ್ಯನಲ್ಲಿನ ದುರ್ಗುಣಗಳನ್ನು ತೊಡೆದು ಹಾಕಿ ಸದ್ಗುಣ, ಸದ್ವಿಚಾರ ಮತ್ತು ಶರಣ ಸಂಸ್ಕೃತಿ ಬಿತ್ತುವಲ್ಲಿ ಪ್ರವಚನ ಅತ್ಯಂತ ಸಹಕಾರಿಯಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೋಮವಾರ ಕರೆದಿದ್ದ ಶ್ರಾವಣ ಮಾಸದ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನಾಲ್ಕು ದಶಕಗಳಿಂದ ನಿರಂತರ ಪಟ್ಟಣದಲ್ಲಿ ಒಂದು ತಿಂಗಳು ಭಕ್ತರಿಗೆ ಪ್ರವಚನ ಮೂಲಕ ಜ್ಞಾನ ದಾಸೋಹ ಉಣಪಡಿಸುತ್ತಿದ್ದಾರೆ. ಷಟಸ್ಥಲ ದರ್ಶನ, ಅಲ್ಲಮ ಬೆಡಗಿನ ವಚನಗಳು, ಶರಣ ಜೀವನ ಶಾಂತ ಜೀವನ ಇತರ ವಿಷಯಗಳ ಕುರಿತು ಪೂಜ್ಯರು ಪ್ರವಚನ ನೀಡಿ ಅರವಿನ ಜ್ಯೋತಿ ಬೆಳಗಿಸಿದ್ದಾರೆ ಎಂದರು.

ಈ ಬಾರಿಯು ಪಟ್ಟಣದಲ್ಲಿ ಆ.5ರಿಂದ ಸೆ.4ರವರೆಗೆ ನಿರಂತರ ಪ್ರವಚನ ನಡೆಯಲಿದೆ. ಶ್ರಾವಣ ಮಾಸದ ಕಾರ್ಯಕ್ರಮಗಳಲ್ಲಿ ಪ್ರವಚನ ಜತೆಗೆ ಅಕ್ಕನಾಗಮ್ಮ ಜಯಂತಿ, ಹಾಲು ಕುಡಿಸುವ ಹಬ್ಬ, ಡಂಬರಾಟ, ಓಣಿ ಮಕ್ಕಳಿಗೆ ಹೊಸ ಬಟ್ಟೆ ಹಾಗೂ ಹಣ್ಣು ಹಂಪಲು ವಿತರಣೆ, ನುಲಿಯ ಚಂದಯ್ಯ ಜಯಂತಿ, ಧಾರವಾಡ ತಪೋವನ ಶ್ರೀಗಳ ಜಯಂತಿ, ಶ್ರೀಮಠದ ಆಶ್ರಯದಲ್ಲಿ ಬೆಳೆಯುತ್ತಿರುವ ಸುದೈವಿ ಮಕ್ಕಳ ದಿನಾಚರಣೆಯನ್ನು ಪೂಜ್ಯ ಅಪ್ಪಗಳ ಜಯಂತಿ ಸೇರಿ ಪ್ರತಿದಿನ ಶ್ರೀಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಭಜನೆ ಮತ್ತು ಪ್ರಸಾದ ದಾಸೋಹ ನಡೆಯಲಿದೆ ಎಂದು ತಿಳಿಸಿದರು.

ಪ್ರಮುಖರಾದ ಪ್ರೊ.ಶಂಭುಲಿಂಗ ಕಾಮಣ್ಣ, ಮಲ್ಲಮ್ಮ ಆರ್.ಪಾಟೀಲ್, ಬಸವರಾಜ ಮರೆ, ಚಂದ್ರಕಾಂತ ಪಾಟೀಲ್, ಮಹಾನಂದ ದೇಶಮುಖ, ಶರಣಪ್ಪ ಬಿರಾದಾರ, ಶಿಖರೇಶ್ವರ ಶಟಕಾರ, ನಾಗಶೆಟ್ಟೆಪ್ಪ ಲಂಜವಾಡೆ, ಗುಂಡಪ್ಪ ಸಂಗಮಕರ, ಸಂತೋಷ ಹಡಪದ, ಶಾಂತಯ್ಯ ಸ್ವಾಮಿ ಇತರರಿದ್ದರು. ಹಿರಿಯ ಸಾಹಿತಿ ವೀರಣ್ಣ ಕುಂಬಾರ ನಿರೂಪಣೆ ಮಾಡಿ ವಂದಿಸಿದರು.

ಸೇವಾ ಸಮಿತಿಗೆ ನಿರ್ಮಲಾ ಪಾಟೀಲ್ ಅಧ್ಯಕ್ಷೆ: ಶ್ರಾವಣ ನಿಮಿತ್ತ ನಡೆಯುವ ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ನಿರ್ಮಲಾ ಚಂದ್ರಕಾಂತ ಪಾಟೀಲ್ ದಂಪತಿಯನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು. ಕಳೆದ ವರ್ಷದ ಸಮಿತಿ ಅಧ್ಯಕ್ಷೆ ವಿದ್ಯಾವತಿ ಸೋಮನಾಥಪ್ಪ ಅಷ್ಟೂರೆ ಅವರನ್ನುಸನ್ಮಾನಿಸಲಾಯಿತು.

ಪಟ್ಟಣದಲ್ಲಿ ಹಿರೇಮಠ ಸಂಸ್ಥಾನದಿಂದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ನಾಲ್ಕು ದಶಕಗಳಿಂದ ಪ್ರವಚನ ನಡೆಸಿಕೊಂಡು ಬರಲಾಗುತ್ತಿದೆ. ಪ್ರವಚನ ಯಶಸ್ಸಿನಲ್ಲಿ ಸೇವಾ ಸಮಿತಿ ಸೇರಿ ಭಕ್ತರ ಸೇವೆ ದೊಡ್ಡದಿದೆ.
| ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net