ಭಕ್ತಿಯಲ್ಲಿ ಮಿಂದೇಳಿಸಿದ ಭಗವಾನ್ ಆದಿನಾಥರ ಜನ್ಮಕಲ್ಯಾಣೋತ್ಸವ

New Varur
Published on

ಹುಬ್ಬಳ್ಳಿ : ಇಲ್ಲಿಗೆ ಸಮೀಪದ ವರೂರಿನಲ್ಲಿರುವ ನವಗ್ರಹ ತೀರ್ಥಕ್ಷೇತ್ರ್ರಲ್ಲಿ ಶುಕ್ರವಾರ ಕಿಕ್ಕಿರಿದ ಜನಸಾಗರದ ನಡುವೆ, ದೇಶದ ಪ್ರಮುಖ ಜೈನ ಆಚಾರ್ಯರ ಸಮ್ಮುಖದಲ್ಲಿ ಭಗವಾನ್ ಶ್ರೀ ಆದಿನಾಥರ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮವು ವಾದ್ಯಮೇಳ, ಗಾಯನ, ನೃತ್ಯ, ಅಭಿನಯಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.

ಭಗವಾನ್ ಶ್ರೀ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕ ಹಾಗೂ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹಾಮಹೋತ್ಸವ ಸಮಾರಂಭದ ಮೂರನೇ ದಿನವಾದ ಶುಕ್ರವಾರದಂದು ಆಯೋಜಿಸಿದ್ದ ಭಗವಾನ್ ಶ್ರೀ ಆದಿನಾಥರ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮವು ಜನಮನ ಸೆಳೆಯಿತು.

ಸ್ವರ್ಗವೇ ಧರೆಗೆ ಇಳಿದು ಬಂದಿದೆ ಎಂಬಂತೆ ಸಜ್ಜಾಗಿದ್ದ ವೇದಿಕೆ ಮೇಲೆ ವಿರಾಜಮಾನವಾಗಿದ್ದ ಭಗವಾನ್ ಆದಿನಾಥ ತೀರ್ಥಂಕರರ ನೂತನ ಶಿಲಾ ಪ್ರತಿಮೆ ಎದುರು ಸೇರಿದ ಇಂದ್ರಸಭೆ ಮತ್ತು ಆದಿನಾಥರ ಜನ್ಮವೃತ್ತಾಂತದ ದೃಶ್ಯಾವಳಿಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದವು.

ಎಂಟು ಕುಮಾರಿಯರು ಮಂಗಲಾಚರಣ ಹಾಡಿಗೆ ನರ್ತಿಸಿದ ನಂತರ ಪೌರಾಣಿಕ ವೇಷಭೂಷಣ ತೊಟ್ಟ ಇಂದ್ರ ದಂಪತಿಗಳನ್ನು ಛತ್ರ, ಚಾಮರ, ವಾದ್ಯಮೇಳ, ಗೀತೆಗಳ ನಡುವೆ ವೈಭವದಿಂದ ವೇದಿಕೆಗೆ ಕರೆತರಲಾಯಿತು.

ಇಂದ್ರ ಇಂದ್ರಾಣಿಯರು ಆದಿನಾಥರ ಜನ್ಮ ವಾರ್ತೆ ಕೇಳಿ ಸಂತಸಪಡುವುದು, ಕುಬೇರ ದಂಪತಿಗಳ ಜತೆಗೆ ಭೂಲೋಕಕ್ಕೆ ಆಗಮಿಸುವುದು, ಅಲ್ಲಿ ಶಿಶು ಆದಿನಾಥರನ್ನು ಎತ್ತಿಕೊಂಡು ಆಡಿಸುವುದು ಮೊದಲಾದ ಕಥಾ ಭಾಗಗಳು ವೇದಿಕೆಯ ಮೇಲೆ ಅಭಿನಯಸಲ್ಪಟ್ಟವು. ವಾರಾಂಗನೆಯರು ಜನ್ಮನಂತರ ಆದಿನಾಥ ಪ್ರತಿಮೆಯ ಶುದ್ಧೀಕರಣ ನೆರವೇರಿಸಿದರು. ಪಂಡಿತರುಗಳಿಂದ ಪ್ರತಿಮೆಗೆ ಪುಷ್ಪಸಮರ್ಪಣೆ ಮತ್ತು ಪ್ರತಿಷ್ಠಾಪನೆ ವಿಧಿ ವಿಧಾನಗಳು ಜರುಗಿದವು.

ವನಸ್ಪತಿಗಳು, ಔಷಧ ದ್ರವ್ಯಗಳು, ಗಿಡಮೂಲಿಕೆಗಳ ಬೇರುಗಳು, ಹತ್ತಾರು ಚೂರ್ಣಗಳು, ಪಂಚಗವ್ಯ, ಮುತ್ತು, ನವರತ್ನ, ವಜ್ರ, ವೈಢೂರ್ಯಗಳು, ರಜತ, ಚಿನ್ನ ಮೊದಲಾದ ಲೋಹಗಳ ಭಸ್ಮಗಳು, ಧಾನ್ಯಗಳು, ದ್ವಿದಳ ಬೇಳೆಗಳು, ಸುಗಂಧ ಪುಷ್ಪಗಳು, ಕಸ್ತೂರಿ, ಗೋರೋಚನ ಮೊದಲಾದ ಸುಗಂಧಗಳು, ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ, ಕಬ್ಬಿನ ಹಾಲು, ಎಳನೀರು, ಸಾಗರ ಮತ್ತು ನದಿಗಳ ಪವಿತ್ರ ಜಲ ಮೊದಲಾದವುಗಳನ್ನು ಒಳಗೊಂಡ 117 ಕಲಶಗಳಿಂದ ದಾನಿಗಳು ಆದಿನಾಥರ ಪಂಚ ಲೋಹ ಪ್ರತಿಮೆಗೆ ಅಭಿಷೇಕ ನೆರವೇರಿಸಿದರು. ಶಿಲಾ ಮೂರ್ತಿಗೆ ಪುಷ್ಪಾಂಜಲಿ ಅರ್ಪಿಸಿದರು.

ಸಾನ್ನಿಧ್ಯ ವಹಿಸಿದ್ದ ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಆಶೀರ್ವಚನ ನೀಡಿ, ಮಾನವ ಜನ್ಮ ಶಾಶ್ವತ ಅಲ್ಲ. ಆದರೆ, ಭಗವಾನ್ ಆದಿನಾಥರ ಕಲ್ಲಿನ ಪ್ರತಿಮೆ ಶಾಶ್ವತ ಎಂದರು.

ಆಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು, ಅಚಾರ್ಯರಾದ ಶ್ರೀ ದೇವ ನಂದಿ ಮಹಾರಾಜರು, ಶ್ರೀ ಗುಪ್ತನಂದಿ ಮಹಾರಾಜರು, ಶ್ರೀ ಗುಲಾಬ ನಂದಿ ಮಹಾರಾಜರು, ಶ್ರೀ ಪದ್ಮ ನಂದಿ ಮಹಾರಾಜರು, ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಮಾತಾಜಿಯವರು ಉಪಸ್ಥಿತರಿದ್ದರು. ರಾಜೇಂದ್ರ ಜೈನ್, ಪ್ರದೀಪ ಮಾಮರ, ಶ್ರೀಮಂತ ಪಂಡಿತ ಮೊದಲಾದವರು ಜನ್ಮಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿದ್ದರು. ಜೈನ್ ಸಮಾಜದ ಪ್ರಮುಖರಾದ ಮಹೇಂದ್ರ ಸಿಂಘಿ, ವಿಮಲ ತಾಳಿಕೋಟೆ, ಇತರರು ಇದ್ದರು.

ಜನ್ಮ ಕಲ್ಯಾಣದ ನಂತರ ಗಾಯಕ ಅನೂಪ ಜಲೋಟಾ ಮತ್ತು ಸಂಗಡಿಗರಿಂದ ಗೀತಗಾಯನ ಸಂಗೀತ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net