

ಕೈಲಾಂಚ: ಭಕ್ತಿಯಿಂದ ಮಾತ್ರ ಶಾಂತಿ, ನೆಮ್ಮದಿ, ಮುಕ್ತಿ ಕಾಣಲು ಸಾಧ್ಯ ಎಂದು ಕನಕಪುರ ಮರಳೇಗವಿ ಮಠಾಧ್ಯಕ್ಷ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.
ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಭಾನುವಾರ ಸಂಜೆ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡಿ, ಕೆಟ್ಟ ಮನಸ್ಸಿನಿಂದ ಪೂಜೆಗಳಲ್ಲಿ ತೊಡಗಿದರೆ ಯಾವ ಲವೂ ಸಿಗುವುದಿಲ್ಲ. ಅಂತರಂಗ ಶುದ್ಧವಾಗಿರಬೇಕು. ಜೀವನದಲ್ಲಿ ಪರಿಶುದ್ಧತೆ, ಏಕಾಗ್ರತೆ ಇದ್ದಾಗ ಮಾತ್ರ ಭಗವಂತನ ಫಲ ಸಿಗಲು ಸಾಧ್ಯ. ಜಗದ್ಗುರು ರೇಣುಕಾಚಾರ್ಯರು ತಪಸ್ಸುಗೈದ ಸ್ಥಳದಲ್ಲಿ ಅವರ ಜಯಂತಿ ಆಚರಿಸುತ್ತಿರುವುದು ಪುಣ್ಯದ ಕಾರ್ಯ ಎಂದರು.
ಕನಕಪುರ ದೇಗುಲ ಮಠಾಧ್ಯಕ್ಷ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ದಯೆ, ಧರ್ಮದ ಮಾರ್ಗದಲ್ಲಿ ನಡೆಯಬೇಕು. ನಡೆ, ನುಡಿ ಶುದ್ಧವಾಗಿದ್ದಾಗ ಮಾತ್ರ ಬಾಳು ಹಸನಾಗುತ್ತದೆ. ಗಳಿಕೆಯಲ್ಲಿ ಅತ್ಯಲ್ಪವನ್ನು ದಾನ ಮಾಡಿದರೆ ಸುಖ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟ ದಾಸೋಹಮಠದ ಕಿರಿಯಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಟ್ಟದಲ್ಲಿ ಕಳೆದ ವರ್ಷದಿಂದ ರೇಣುಕಾಚಾರ್ಯರ ಜಯಂತಿ ಆಚರಿಸಲಾಗುತ್ತಿದೆ. ಈ ಮೂಲಕ ಭಕ್ತರಿಗೆ ಸನ್ಮಾರ್ಗದ ವಿಚಾರ ತಿಳಿಸುವ ಸತ್ಕಾರ್ಯ ಮಾಡಲಾಗುತ್ತಿದೆ ಎಂದರು.
ದಾಸೋಹ ಮಠದ ಹಿರಿಯ ಶ್ರೀ ಬಸವಲಿಂಗರಾಜ ಸ್ವಾಮೀಜಿ, ಚಿಕ್ಕಕಲ್ಬಾಳು ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೇವೂರು ಮಠಾಧ್ಯಕ್ಷರಾದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಚನ್ನಪಟ್ಟಣ ವಿರಕ್ತಮಠದ ಶ್ರೀ ಶಿವರುದ್ರ ಸ್ವಾಮೀಜಿ, ಮಳವಳ್ಳಿ ಗುರುವಿನಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಹಲಸಹಳ್ಳಿ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ, ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಮಂಡ್ಯ ಹೊಸಹಳ್ಳಿ ಮಠದ ಶ್ರೀ ರೇವಣ್ಣ ಸ್ವಾಮೀಜಿ ಆಶೀರ್ವಚನ ನೀಡಿದರು.
ಶತಾಯುಷಿ ಅಮ್ಮನಪುರದೊಡ್ಡಿ ನಿಂಗಯ್ಯ, ನಾಟಿ ವೈದ್ಯ ಕೋಟಹಳ್ಳಿ ನಾರಾಯಣಪ್ಪ, ಸಮಾಜ ಸೇವಕಿ ಸಾವಿತ್ರಿ ರಾವ್, ಪೂಜಾ ಕುಣಿತ ಕಲಾವಿದೆ ಅಣಜವಾಡಿ ಕು. ಪ್ರಜಾಶ್ರೀ ಅವರನ್ನು ಸನ್ಮಾನಿಸಲಾಯಿತು. ಚರಿತ್ರಾರಾವ್, ಕುಮಾರಿ ಎಂ.ಶ್ರೇಯಾ, ಬಿ.ಜ್ಯೋತಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ನಂತರ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಂತರ ರೇಣುಕಾಚಾರ್ಯರ ಉತ್ಸವಮೂರ್ತಿ ಭವ್ಯ ಮೆರವಣಿಗೆ ಜಾನಪದ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ನಡೆಯಿತು.
ರಾಮನಗರ ಆರ್‌ಟಿವಿಎಸ್‌ಎಸ್ ಅಧ್ಯಕ್ಷ ಶಿವಲಿಂಗಯ್ಯ, ತಾಪಂ ಸದಸ್ಯ ರೇಣುಕಾಪ್ರಸಾದ್, ಹುಲಿಕೆರೆ-ಗುನ್ನೂರು ಗ್ರಾಪಂ ಅಧ್ಯಕ್ಷೆ ಸವಿತಾ ದೇವರಾಜು, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಟೇಲ್ ರಾಜು, ಕೈಲಾಂಚ ಗ್ರಾಪಂ ಅಧ್ಯಕ್ಷ ಆರ್.ಪಾಂಡುರಂಗ, ಗ್ರಾಪಂ ಸದಸ್ಯ ಎ.ಸಿ. ಕೆಂಪಯ್ಯ, ಮಾಜಿ ಅಧ್ಯಕ್ಷ ಎಚ್.ಎಸ್. ದೇವರಾಜು, ಅರ್ಚಕ ಮಂಜುನಾಥ್ ಇತರರಿದ್ದರು.
ಧರ್ಮದ ತಳಹದಿ ಮೇಲೆ ನಡೆದಾಗ ಮಾತ್ರ ಸಮಾಜದಲ್ಲಿ ಸಂಸ್ಕಾರಯುತ ವ್ಯಕ್ತಿಯಾಗಿ ಬದುಕಲು ಸಾಧ್ಯ. ಹುಟ್ಟು-ಸಾವು ನಿಶ್ಚಿತ, ಅದರ ಮಧ್ಯೆ ನಡೆಸುವ ಬದುಕು ಸಾರ್ಥಕವಾಗಬೇಕು. -ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಕನಕಪುರ ದೇಗುಲ ಮಠಾಧ್ಯಕ್ಷ