ಭಕ್ತಿ ಜ್ಞಾನ ಬೇಡಿದರೆ ಜೀವನಪೂರ್ತಿ ಬೆಳಕು: ಶ್ರೀವಿದ್ಯೇಶತೀರ್ಥ ಸ್ವಾಮೀಜಿ

17
Published on

ಮೈಸೂರು: ದೇವರಲ್ಲಿ ನಾವು ಕೇವಲ ಲೌಕಿಕ ಸಂಪತ್ತನ್ನು ಬೇಡಬಾರದು. ಅವು ಕೆಲವೇ ದಿನಕ್ಕೆ ಮಾತ್ರ ಉಪಯೋಗ ಆಗುತ್ತವೆ. ಭಕ್ತಿ, ಜ್ಞಾನವನ್ನು ಬೇಡಿದರೆ ಜೀವನ ಪೂರ್ಣ ಬೆಳಕಾಗಿ ಮುಕ್ತಿ ದೊರಕುತ್ತದೆ ಎಂದು ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ರಾಮಸ್ವಾಮಿ ವೃತ್ತದಲ್ಲಿರುವ ಶ್ರೀ ವೆಂಕಟಾಚಲಧಾಮದಲ್ಲಿ ಬುಧವಾರ ಆಯೋಜಿಸಿದ್ದ 13ನೇ ಸಂವತ್ಸರೋತ್ಸವದಲ್ಲಿ ಶ್ರೀವೆಂಕಟಾಚಲಸ್ವಾಮಿ ಮತ್ತು ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷ ಪೂಜೆ ಸಮರ್ಪಿಸಿ ಅವರು ಆಶೀರ್ವಚನ ನೀಡಿದರು.
ಹಣ, ಕಾರು, ಮನೆ ಮತ್ತಿತರ ಬೇಡಿಕೆ ಈಡೇರಿಸುವಂತೆ ದೇವರಲ್ಲಿ ಬೇಡುವವರೇ ಹೆಚ್ಚು. ಆದರೆ ಮನುಷ್ಯ ಸಮಾಜದಲ್ಲಿ ಸಭ್ಯನಾಗಿ ಬದುಕಲು ಜ್ಞಾನ ಬೇಕು. ಅದನ್ನು ಕೊಡುವಂತೆ ಪ್ರಾರ್ಥಿಸುವ ಪ್ರವೃತ್ತಿ ಹೆಚ್ಚಾಗಲಿ. ಕಲಿಗಾಲದಲ್ಲಿ ಮನುಷ್ಯರಿಗೆ ರಾಕ್ಷಸಿ ಪ್ರವೃತ್ತಿ ಹೆಚ್ಚಾಗಿದೆ. ಅಧ್ಯಾತ್ಮ ಜ್ಞಾನದಿಂದ, ಸಾಧು ಸಂತರ ಒಡನಾಟದಿಂದ ನಾವೇನು ದೇವರಾಗುವುದು ಬೇಡ. ಮನುಷ್ಯರಂತಾದರೂ ಜೀವಿಸಿ ಸ್ವಾವಲಂಬಿ ದೇಶ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ ಎಂದವರು ನುಡಿದರು.
ದೇವರು ಸರ್ವ ವ್ಯಾಪಿ. ಆದರೆ ಎಲ್ಲಿ ಆತ್ಮಪೂರ್ವಕ ಪೂಜೆ ಮತ್ತು ಅನ್ನದಾನ ನಡೆಯುತ್ತವೆಯೋ ಅಲ್ಲಿ ದೇವರ ಸಾನ್ನಿಧ್ಯ ಜಾಗೃತವಾಗಿರುತ್ತದೆ. ಹಾಗಾಗಿ ದೇವಸ್ಥಾನಗಳಲ್ಲಿ ಹೆಚ್ಚಾಗಿ ಪೂಜಾದಿಗಳು, ಅನ್ನ ಸಂತರ್ಪಣೆಗಳು ನಡೆಯಬೇಕು. ಈ ಮೂಲಕ ಜನರಿಗೆ ನೆಮ್ಮದಿ ದೊರಕುತ್ತದೆ. ಸಾಮಾಜಿಕ ಸಾಮರಸ್ಯ ಸಾಧ್ಯವಾಗುತ್ತದೆ ಎಂದು ಹೇಳಿದರು.
ವೇಂಕಟಾಚಲ ಧಾಮದಲ್ಲಿ ಬುಧವಾರ ಬೆಳಗ್ಗೆ 50 ಕಲಶಾರಾಧನೆ ನಂತರ ಪವಿತ್ರ ಜಲದಿಂದ ವೆಂಕಟೇಶ ದೇವರಿಗೆ ಕಲಶಾಭಿಷೇಕ ಮತ್ತು ವಿವಿಧ ಹೋಮಗಳು ಸಂಪನ್ನಗೊಂಡವು. ನಂತರ ಶ್ರೀಗಳು ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಪೂಜೆ ನೆರವೇರಿಸಿದರು. ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬ್ರಹ್ಮ ಕಲಶಾಭಿಷೇಕಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.
ಭಾಗವತಾಶ್ರಮ ಪ್ರತಿಷ್ಠಾನದ ಟ್ರಸ್ಟಿ ರವೀಂದ್ರ, ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರ, ವೇದ ವಿದ್ವಾಂಸ ಕೃಷ್ಣಕುಮಾರ ಆಚಾರ್, ಗಿರೀಶ ಆಚಾರ್, ವ್ಯವಸ್ಥಾಪಕ ರಾಘಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net