

ಮಂಗಳೂರು: ಭಕ್ತಿಯೇ ಧರ್ಮದ ಮೂಲ. ಹಿಂದೂಗಳಲ್ಲಿ ವಿದ್ಯಾಭ್ಯಾಸದ ಜ್ಞಾನ, ಆರ್ಥಿಕ ಹಿನ್ನೆಲೆ ಇಲ್ಲದಿದ್ದರೂ ಎಲ್ಲಿಯೂ ಭಕ್ತಿಯ ಕೊರತೆ ಆಗಿಲ್ಲ. ಭಕ್ತಿಯ ಭಾವನೆ ನಮ್ಮ ಜನಾಂಗದಲ್ಲಿ ಪ್ರತಿ ಕಾಲದಲ್ಲೂ ಹೆಚ್ಚಾಗುತ್ತಿದೆ ಎಂದು ಶ್ರೀ ಚಿತ್ರಾಪುರ ಮಠ ಸಂಸ್ಥಾನ ಶಿರಾಲಿ ಇದರ ಮಠಾಧೀಶರಾದ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹೇಳಿದರು.
ಸಂಘನಿಕೇತನದಲ್ಲಿ ನಡೆಯುತ್ತಿರುವ 77 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು.
ಗಣೇಸೋತ್ಸವದಂತಹ ಕಾರ್ಯದ ಮೂಲಕ ಸಮಾಜ ಸಂಘಟನೆಯ ಕಾರ್ಯ ಮಾಡುವುದು ಇಂದಿನ ಅನಿವಾರ್ಯತೆಯಿದೆ ಇಂದಿನ ಕಾಲಘಟ್ಟದಲ್ಲಿ ಆರ್ಥಿಕವಾದ ಸಮಸ್ಯೆ ಇದ್ದರೂ ನೀತಿವಂತರಾಗಿ ಬದುಕುವ ಕೆಲಸ ಮಾಡಬೇಕು. ಈ ಸಂದರ್ಭ ನಂಬಿದವರಿಗೆ ಇಂಬು ಕೊಡುತ್ತೇನೆಂಬ ಹಿರಿಯರ ಮಾತಿನಲ್ಲಿ ಸತ್ಯವಿದೆ. ಅದಕ್ಕಾಗಿ ಭಕ್ತಿ ಬೇಕು. ಭಕ್ತಿಯೇ ನಮ್ಮನ್ನು ಉಳಿಸುತ್ತದೆ. ಭಕ್ತಿಯಿಂದ ಹಾಕಿದ ಕಲ್ಲಿನಲ್ಲೂ ಶಕ್ತಿ ನೆಲೆಯಾಗುತ್ತದೆ ಎಂದರು.
ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳಾದ ವಿನೋದ್ ಶೆಣೈ, ರಘುವೀರ್ ಕಾಮತ್, ಗಜಾನನ ಪೈ, ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಸತೀಶ್ ಪ್ರಭು, ಆನಂದ ಪಾಂಗಳ, ಸುರೇಶ್ ಕಾಮತ್, ಎಸ್.ಆರ್ ಕುಡ್ವ, ಜೀವನರಾಜ್ ಶೆಣೈ, ಅಭಿಷೇಕ್ ಭಂಡಾರಿ, ನಂದನ್ ಮಲ್ಯ ಸಹಿತ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು.