ಐರಸಂಗ ಕವಿತೆಗಳಲ್ಲಿ ಭಕ್ತಿಯೇ ಪ್ರಧಾನ

13 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕವಿ ಡಾ. ವಿ.ಸಿ. ಐರಸಂಗ ಕವಿತೆಗಳಲ್ಲಿ ಭಕ್ತಿಯೇ ಪ್ರಧಾನವಾಗಿದೆ ಎಂದು ಕವಿವ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಚೆನ್ನವ್ವ ಚೆನ್ನಪ್ಪ ಐರಸಂಗ ಹಾಗೂ ರಾಮಚಂದ್ರ ಚಿಲಕವಾಡ ಸ್ಮರಣಾರ್ಥ ಭಾನುವಾರ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾತ್ವಿಕತೆ, ಮುಗ್ಧತೆ, ಸರಳತೆ ಹಾಗೂ ವಿನಯತೆ ವಿ.ಸಿ. ಐರಸಂಗರ ವ್ಯಕ್ತಿತ್ವ. ಸೈಕಲ್ ಮೇಲೆ ಊರೆಲ್ಲ ತಿರುಗುತ್ತಲೇ ತಮ್ಮ ಕಾವ್ಯದ ರಸದೌತಣ ಉಣಬಡಿಸಿದ್ದಾರೆ. ಐರಸಂಗ ದೇವರನ್ನು ಅತ್ಯಂತ ಸೊಗಸಾಗಿ ತಮ್ಮ ಬರೆವಣಿಗೆ ಮೂಲಕ ಬಣ್ಣಿಸಿದನ್ನು ಅವರ ಅನೇಕ ಕಾವ್ಯಗಳಲ್ಲಿ ಕಾಣಬಹುದು ಎಂದರು.
ಅರುಣ ನಾಯಕ ಮಾತನಾಡಿ, ಡಾ. ಐರಸಂಗ ಅವರಿಗೂ ಆಕಾಶವಾಣಿಗೂ ಅವಿನಾಭಾವ ಸಂಬಂಧವಿದೆ. ಅವರ ಸಾಕಷ್ಟು ಕವನಗಳನ್ನು ಗೀತೆಗಳಾಗಿ ಪರಿವರ್ತಿಸಿ ಇಂದಿಗೂ ಪ್ರಸಾರ ಮಾಡಲಾಗುತ್ತಿದೆ. ರಾಗ ಸಂಯೋಜನೆಯಲ್ಲಿ ಅವರ ಉಪಯುಕ್ತ ಸಲಹೆ, ಸರಳ ವ್ಯಕ್ತಿತ್ವ ಎಲ್ಲವೂ ಸ್ಮರಣೀಯ ಎಂದರು.
ಮಾಯಾ ರಾಮನ್ ಮಾತನಾಡಿ, ಡಾ. ಐರಸಂಗರ ಹಲವಾರು ಭಕ್ತಿ ಕವನಗಳು ಗೀತೆಗಳಾಗಿ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿವೆ. ಅನೇಕ ಶಾಲೆಗಳಲ್ಲಿ ಅವುಗಳನ್ನು ಪ್ರತಿನಿತ್ಯ ಹಾಡಲಾಗುತ್ತಿದೆ. ಮೂರ್ತಿ ಚಿಕ್ಕದಾದರೂ ಸಾಧನೆ ಆಕಾಶದಷ್ಟಿದೆ. ಕವಿ ಅಲ್ಲದೆ ಉತ್ತಮ ತಬಲಾ ವಾದಕರೂ ಆಗಿದ್ದರು. ಸಾಹಿತ್ಯ-ಸಂಗೀತಗಳ ಜ್ಞಾನ ಅಪಾರವಾಗಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net