

ಚನ್ನಗಿರಿ: ಭಕ್ತಿ ಹೆಸರಲ್ಲಿ ದ್ವೇಷ, ಅಸೂಯೆ ಬೆಳೆಸುವಂಥ ಕೆಲಸ ಮಾಡಲಾಗುತ್ತಿದೆ. ವಿಘ್ನನಾಯಕನ ಎದುರೇ ಅನೇಕ ವಿಘ್ನಗಳನ್ನು ತಂದುಕೊಂಡು ಗಣಪತಿ ಇಡುವವರನ್ನು ವಿಶೇಷವಾಗಿ ನೋಡುವಂತೆ ಅಗಿದೆ ಎಂದು ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ತಿಳಿಸಿದರು.
ಊರ ಬಾಗಿಲ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳದ ಗಣಪತಿ ಸಮಿತಿಯವರು ಪ್ರತಿಷ್ಠಾಪಿಸಿರುವ 14ನೇ ವರ್ಷದ ಗಣೇಶ ಉತ್ಸವದ ಅಂಗವಾಗಿ ಸೋಮವಾರ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಿಸಿ, ಮಾತನಾಡಿದರು.
ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರೃ ಪಡೆಯಲು ಭಾರತೀಯರನ್ನು ಬ್ರಿಟಿಷರ ವಿರುದ್ಧ ಸಂಘಟಿಸುವುದಕ್ಕಾಗಿ ಗಣೇಶ ಉತ್ಸವ ಆಚರಣೆಗೆ ತಂದರು. ಇಂತಹ ಗಣಪತಿ ಪ್ರತಿಷ್ಠಾಪನೆಗೆ ಅನೇಕ ನಿಯಮಗಳು, ನಿಬಂಧನೆಗಳು ಬರುವಂತೆ ನಾವೆಲ್ಲರೂ ಮಾಡಿದ್ದೇವೆ ಎಂದು ಬೇಸರಪಟ್ಟರು.
ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಘಟನೆ ಎಲ್ಲರೂ ತಲೆತಗ್ಗಿಸುವಂತೆ ಆಗಿದೆ. ಭಕ್ತಿ ಹೆಸರಲ್ಲಿ ಗಲಾಟೆ ಮಾಡಿಕೊಂಡು ಅಮಾಯಕರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಕಾನೂನು ಬಿಗಿಯಾಗಿದ್ದರೂ ಆಸ್ತಿ, ಹಣ ನಾಶ ಮಾಡಿಕೊಂಡ ಅಮಾಯಕರ ನೋವು ಕೇಳುವವರೂ ಇಲ್ಲದಂತಾಗಿದೆ. ತಾಳ್ಮೆಯನ್ನು ಯಾರೂ ಕಳೆದುಕೊಳ್ಳಬಾರದು. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ನಾವೆಲ್ಲರೂ ಒಂದೇ ಎಂಬ ಭಾವನೆ ಬಂದು ಹಬ್ಬವನ್ನು ಸಂತೋಷದಿಂದ ಆಚರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 35 ಜೋಡಿಗಳು ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿ ಸಂಕಲ್ಪ ಮಾಡಿದರು.
ವಿಹಿಂಪ ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ರವಿಚಂದ್ರ, ಪುರಸಭೆ ಮಾಜಿ ಸದಸ್ಯ ಕರಡೇರ ರಾಜಣ್ಣ, ಚನ್ನಬಸಪ್ಪ, ಸುಜಾತಾ ಚನ್ನಬಸಪ್ಪ, ವೀಣಾ ವಸಂತ ಇತರರಿದ್ದರು.