

ನಾಯಕನಹಟ್ಟಿ: ಶ್ರಾವಣ ಬಂತೆಂದರೆ ದೇಗುಲಗಳು ಭಕ್ತರಿಂದ ತುಂಬಿ ತುಳುಕುತ್ತವೆ. ಮಧ್ಯ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ನಾಯಕನಹಟ್ಟಿಗೆ ಕಡೇ ಶ್ರಾವಣ ಸೋಮವಾರ ಭಕ್ತಸಾಗರವೇ ಹರಿದುಬಂದಿತ್ತು.
ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಜನರು, ಶ್ರೀಗುರು ತಿಪ್ಪೇರುದ್ರಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆಯಿಂದಲೇ ಭಕ್ತರು ಪಟ್ಟಣದ ಒಳಮಠ, ಹೊರಮಠಕ್ಕೆ ಆಗಮಿಸಿ ಹಣ್ಣು, ಕಾಯಿ ಕೊಟ್ಟು ಭಕ್ತಿ ಸಮರ್ಪಿಸಿದರು. ಒಳಮಠದ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ಸಾಮಾನ್ಯವಾಗಿತ್ತು. 11 ಗಂಟೆಗೆ ಏಕಾಏಕಿ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ನೂಕುನುಗ್ಗಲು ತಪ್ಪಿಸಲು ಶಾಮಿಯಾನ ಹಾಕಿ ಭಕ್ತರಿಗೆ ದೇವರ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಯಿತು.
ಮಠದ ವತಿಯಿಂದ ವಿಶೇಷವಾಗಿ ಮಾಡಲಾದ್ದ ಗೋಧಿ ಪಾಯಸ, ಅನ್ನ, ಸಾಂಬರ್, ಪಲ್ಯವನ್ನು ಭಕ್ತರು ಸವಿದರು. ಕುಡಿಯುವ ನೀರು, ಶೌಚಗೃಹ ಸೇರಿ ಮೂಲ ಸೌಲಭ್ಯ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿತ್ತು.
ದಾಸೋಹಕ್ಕೆ ಏಳು ಕ್ವಿಂಟಾಲ್ ಅಕ್ಕಿ ಬಳಸಲಾಗಿದ್ದು, ಸಹಸ್ರಾರು ಮಂದಿ ಊಟ ಮಾಡಿದ್ದು, ದಾಸೋಹಕ್ಕೆ ಕೂಡ್ಲಿಗಿ ತಾಲೂಕು ಮಾಕನಡಕು ಗ್ರಾಮದ ವೀರಮ್ಮ ನೀಲಕಂಠಪ್ಪ ಕುಟುಂಬ ಹಾಗೂ ಜಗಳೂರು ತಾಲೂಕು ಬಂಗಾರಕ್ಕನಗುಡ್ಡ ಗ್ರಾಮಸ್ಥರು ಅಕ್ಕಿಯನ್ನು ದೇಣಿಯಾಗಿ ನೀಡಿದ್ದರು.
ಕುದಾಪುರ: ಚಿಂತಗುಂಟ್ಲು ಕಾಲಭೈರವೇಶ್ವರ ಸ್ವಾಮಿಗೆ ಶ್ರಾವಣ ಮಾಸದ ಭಾನುವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವರಿಗೆ ಬೆಳ್ಳಿ ಆಭರಣ, ಪುಷ್ಪಗಳಿಂದ ಅಲಂಕರಿಸಿ ಪೂಜೆ ಮಾಡಲಾಯಿತು.