ಮಾರಮ್ಮ ಜಾತ್ರೋತ್ಸವಕ್ಕೆ ಭಕ್ತಸಾಗರ

19 CLK JATHRE (3)
Published on

ಚಳ್ಳಕೆರೆ: ತಾಲೂಕಿನ ಗೌರಸಮುದ್ರ ಗ್ರಾಮದ ಸಮೀಪ ತುಮಲಿನಲ್ಲಿ ಮಂಗಳವಾರ ಗೌರಸಮುದ್ರ ಮಾರಮ್ಮನ ದೇವಿಯ ಜಾತ್ರೋತ್ಸವ ಅದ್ದೂರಿಯಾಗಿ ನೆರವೇರಿತು.
ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಆಗಮಿಸಿದ್ದ ಅಂದಾಜು 2 ಲಕ್ಷಕ್ಕೂ ಹೆಚ್ಚು ಭಕ್ತರು, ದೇವಿಯ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹರಕೆ ತೀರಿಸಿ ಪುನೀತರಾದರು.
ಮಧ್ಯ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದಿರುವ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಬುಡಕಟ್ಟು ಆಚರಣಾ ಪದ್ಧತಿಯಂತೆ ಆಚರಿಸುವುದು ಒಂದು ವಿಶೇಷ. ಶ್ರಾವಣ ಮಾಸ ಕಳೆದ ಮರುದಿನವೇ ದೇವಿಯ ಜಾತ್ರೆ ಕಾರ್ಯ ಆರಂಭವಾಗುವ ಪದ್ಧತಿ ಇದೆ. ಜಾತ್ರೆ ನಡೆಯುವ ಒಂದು ವಾರ ಮುಂಚಿತವಾಗಿ ಪೂಜಾ ವಿಧಿವಿಧಾನಗಳು ಆರಂಭವಾಗಿ ಬಳಿಕ ತುಮಲಿನಲ್ಲಿ ಲಕ್ಷಾನು ಭಕ್ತರ ಸಮ್ಮುಖದಲ್ಲಿ ದೇವಿಯ ಜಾತ್ರೆ ನೆರವೇರುವುದು ವಾಡಿಕೆ. ಗೌರಸಮುದ್ರ ಗ್ರಾಮದ ದೇವಸ್ಥಾನದಿಂದ ದೇವಿಯನ್ನು ಜಾತ್ರಾ ಸ್ಥಳಕ್ಕೆ ಮಧ್ಯಾಹ್ನದ ಹೊತ್ತಿಗೆ ಕರೆತರಲಾಯಿತು. ಮೇಲುದೀಪ ಹಚ್ಚಿ, ದೇವಿಯ ಹೊತ್ತ ಭಕ್ತರು ಮೂರು ಸುತ್ತು ಸುತ್ತುವ ಹೊತ್ತಿಗೆ, ನೆರೆದಿದ್ದ ಭಕ್ತರು ದೇವಿಗೆ ಹೂವು, ಬಾಳೆಹಣ್ಣು, ಕೋಳಿ ಸೇರಿದಂತೆ ರೈತರು ಬೆಳೆದ ಧವಸ-ಧಾನ್ಯಗಳನ್ನು ತೂರಿ ಭಕ್ತಿ ಸಮರ್ಪಿಸಿದರು.
ಬೇವಿನ ಸೀರೆ ಹರಕೆ:
ದೇವಿಗೆ ಹರಕೆ ಮಾಡಿಕೊಂಡ ಭಕ್ತರು ಸಣ್ಣ ಹಸುಗೂಸಿನಿಂದ ಹಿಡಿದು ವಯೋವೃದ್ಧರ ತನಕ ಪುರುಷರು ಮತ್ತು ಮಹಿಳೆಯರು ಬೇವಿನ ಸೀರೆಯುಟ್ಟು ಅರಿಷಿಣ ಕುಂಕುಮ ಬಳಿದ ಮತ್ತು ನೀರು ತುಂಬಿದ ಗಟೆಯನ್ನು ತಲೆಯ ಮೇಲೆ ಹೊತ್ತು, ಬಾಯಲ್ಲಿ ಬೇವಿನ ಸೊಪ್ಪು ಕಚ್ಚಿಕೊಂಡು ಪೌಳಿಯನ್ನು ಮೂರು ಸುತ್ತು ಹಾಕಿ ಹರಕೆ ತೀರಿಸಿಕೊಂಡ ಘಟನೆಗಳು ಕಂಡು ಬಂದವು.
ಪ್ರಾಣಿ ಬಲಿ:
ತುಮಲಿನ ಪೌಳಿಯಲ್ಲಿ ಪೂಜೆ ಪೂರೈಸಿಕೊಂಡ ಭಕ್ತರು ಹೊರವಲಯ ಭಾಗದಲ್ಲಿ ಕುರಿ, ಮೇಕೆ, ಕೋಳಿ ಪ್ರಾಣಿಗಳನ್ನು ದೇವಿಗೆ ಬಲಿಕೊಟ್ಟು ಭರ್ಜರಿಯಾಗಿ ಬಾಡೂಟ ತಯಾರಿಸಿಕೊಂಡು ಕುಟುಂಬ ಪರಿವಾರ ಮತ್ತು ಸಂಬಂಧಿಕರು ಗುಂಪು-ಗುಂಪುಗಳಾಗಿ ಹೊಲ ದಿನ್ನೆಗಳ ನಡುವೆ ಸೇವಿಸಿ ದೇವಿಯ ಹರಕೆ ಕಾರ್ಯದಂತೆ ಭಕ್ತಿ ಮೆರೆದರು.
ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕೆಪಿಸಿಸಿ ಸದಸ್ಯ ಡಾ.ಬಿ. ಯೋಗೇಶ್‌ಬಾಬು, ಗ್ರಾಪಂ ಅಧ್ಯಕ್ಷ ಎಂ. ಓಬಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸೇರಿದಂತೆ ಇತರೆ ಗಣ್ಯರು ದೇವಿಯ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು.
ಅವ್ಯವಸ್ಥೆ:
ಜಾತ್ರಾ ಮಹೋತ್ಸವಕ್ಕೆ ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದರೂ, ಭಕ್ತರು ಸಾಗಿಬರುವ ರಸ್ತೆ ಮಾರ್ಗಗಳು ಸರಿಯಾದ ಅಭಿವೃದ್ಧಿ ಪಡಿಸಿರಲಿಲ್ಲ. ತಗ್ಗು ಗುಂಡಿಗಳಾದ ರಸ್ತೆಗಳಲ್ಲಿ ಭಕ್ತರ ಸಂಚಾರ ಸುಗಮಕ್ಕೆ ಪರದಾಡುವ ಪರಿಸ್ಥಿತಿ ಇತ್ತು. ಭಕ್ತರ ಸುರಕ್ಷತೆಗೆ ಸಿಸಿ ಕ್ಯಾಮೆರಾ ಸೇರಿದಂತೆ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿತ್ತು.
ಬೆಳೆಗೆ ಕಾವಲು:
ಜಾತ್ರೆಗೆ ಬರುವ ಭಕ್ತರು ರಸ್ತೆ ಬದಿಯ ಜಮೀನುಗಳ ಫಸಲು ತುಳಿಯದಂತೆ ಜಮೀನು ಮಾಲೀಕರು ರಸ್ತೆ ಬದಿಯಲ್ಲಿ ಸಾಲು ಸಾಲಾಗಿ ನಿಂತು ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ಅನಿಷ್ಟ ಆಚರಣೆಗಳ ವಿರುದ್ಧ ಆಕ್ರೋಶ:
ಜಾತ್ರಾ ಸ್ಥಳದಲ್ಲಿ ವರ್ಷದಿಂದ ವರ್ಷಕ್ಕೆ ಮೂಢನಂಬಿಕೆ ಆಚರಣಾ ಪದ್ಧತಿಗಳು ಹೆಚ್ಚುತ್ತಿವೆ ಎನ್ನುವುದಕ್ಕೆ ಕೆಲ ಸಾಮಾಜಿಕ ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಆಡಳಿತ ಜಾತ್ರೆಯಲ್ಲಿ ಪ್ರಾಣಿಬಲಿ, ಬೇವಿನ ಸೀರೆ ಹರಕೆ ನಿಷೇಧಿಸಲಾಗಿದೆ ಎಂದು ನಾಮಕಾವಸ್ಥೆಯಲ್ಲಿ ಹೇಳುತ್ತಾರೆಯೇ ಹೊರತು, ತಡೆಯುವ ಕೆಲಸ ಮಾಡುತ್ತಿಲ್ಲ. ಲಕ್ಷಾನು ಭಕ್ತರ ನಡುವೆ ಅರೆಬೆತ್ತಲೆಯೊಂದಿಗೆ ಬೇವಿನ ಸೀರೆ ಉಟ್ಟು ಭಕ್ತರು ಹರಕೆ ತೀರಿಸುವುದು ಬಹಿರಂಗವಾಗಿ ನಡೆಯುತ್ತದೆ. ಇಂತಹ ಮೌಢ್ಯ ಆಚರಣೆಗಳನ್ನು ನಿಯಂತ್ರಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net