

ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಮಹದೇಶ್ವರಸ್ವಾಮಿ ದೇಗುಲಕ್ಕೆ ಸೋಮವಾರ ಅಮಾವಾಸ್ಯೆ ನಿಮಿತ್ತ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಪ್ರತಿ ಅಮಾವಾಸ್ಯೆ ದಿನ ಇಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುವ ವಾಡಿಕೆ ಇದೆ. ನೂರಾರು ವರ್ಷಗಳ ಐತಿಹ್ಯ ಇರುವ ಈ ದೇಗುಲ ಇಲ್ಲಿನ ಸುವರ್ಣಾವತಿ ನದಿ ದಡದಲ್ಲಿದೆ. ಇಲ್ಲಿ ಮಹದೇಶ್ವರರು ಪಕ್ಕದಲ್ಲಿರುವ ಕಾರಾಪುರ ವಿರಕ್ತಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತು ಈ ನದಿಯ ದಡದಲ್ಲಿ ತಪವನ್ನು ಮಾಡಿದ್ದರು ಎಂಬುದು ಇಲ್ಲಿನ ಐತಿಹ್ಯ.
ಆಲದ ಮರದ ಬೀಳುಗಳ ನಡುವೆ ಇರುವ ಈ ದೇಗುಲದಲ್ಲಿ ಅಮಾವಾಸ್ಯೆ ನಿಮಿತ್ತ ಬೆಳಗ್ಗೆಯಿಂದಲೇ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜೆ ನೆರವೇರಿಸಲಾಯಿತು. ದೇಗುಲವನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಹರಕೆ ಹೊತ್ತ ಭಕ್ತರು ದಂಡಗೋಲು ಸೇವೆ ಹಾಗೂ ರಥೋತ್ಸವ ಸೇರಿದಂತೆ ವಿವಿಧ ಸೇವೆಗಳನ್ನು ಮಾಡಿ ಭಕ್ತಿ ಮೆರೆದರು. ಭಕ್ತರಿಗೆ ದೇಗುಲದ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.