

ಲಕ್ಕೂರು: ಪ್ರಸಿದ್ಧ ಯಾತ್ರಾಸ್ಥಳ ಚಿಕ್ಕತಿರುಪತಿಯ ಪ್ರಸನ್ನ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ದೇಗುಲದಲ್ಲಿ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕೈಂಕರ್ಯಗಳು ಅದ್ದೂರಿಯಾಗಿ ನೆರವೇರಿದವು.
ವೈಕುಂಠ ಏಕಾದಶಿ ಪ್ರಯುಕ್ತ 1 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ದರ್ಶನ ಪಡೆದರು. ಮಾಲೂರು ತಾಲೂಕು ಚಿಕ್ಕತಿರುಪತಿಯ ಪ್ರಸನ್ನ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಶ್ರೀನಿವಾಸನ ನೆಲೆಯಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವು ಸಹ ವೈಕುಂಠ ಏಕಾದಶಿ ಅಂಗವಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ದೇವಾಲಯದಲ್ಲಿ ಸಾಂಸತಿಕ ಕಾರ್ಯಕ್ರಮಗಳು ಸೇರಿ ವಿವಿಧ ಕಾರ್ಯಕ್ರಮಗಳು ಭವ್ಯ ಪರಂಪರೆ ಸಾರಿದವು.
ಸ್ವಾಮಿಗೆ ದೇವಾಲಯದ ಪ್ರಧಾನ ಅರ್ಚಕರಾದ ರವಿ, ಗೋಪಾಲಕೃಷ್ಣ ಭಾರಧ್ವಾಜ್, ಎನ್.ಶ್ರೀಧರ್ ಅವರ ನೇತೃತ್ವದಲ್ಲಿ ತಿರುಮಂಜನ, ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಿದರು. ಉತ್ಸವ ಮೂರ್ತಿಯನ್ನು ವಿಶೇಷ ಹೂಗಳಿಂದ ಅಲಂಕರಿಸಿ ವೈಕುಂಠ ದ್ವಾರದಲ್ಲಿ ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಉತ್ತರ (ವೈಕುಂಠ) ದ್ವಾರದಲ್ಲಿರುವ ಉತ್ಸವ ಮೂರ್ತಿಯ ದರ್ಶನ ಮಾಡುವುದೇ ಭಕ್ತರಿಗೆ ಮಹಾ ಭಾಗ್ಯವಾಗಿದ್ದು, ಉತ್ಸವ ಮೂರ್ತಿ ನೋಡಲು ತಮಿಳುನಾಡು, ಆಂಧ್ರಪ್ರದೇಶ ಸೇರಿ ರಾಜ್ಯದ ಹಲವು ಮೂಲೆಗಳಿಂದ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಗೋವಿಂದ ನಾಮಸ್ಮರಣೆ ಮಾಡುತ್ತಾ ದೇವರ ದರ್ಶನ ಮಾಡಿದರು. ಭಕ್ತರಿಗೆ ದೇವಾಲಯದ ವತಿಯಿಂದ ಲಡ್ಡು ಪ್ರಸಾದವನ್ನು ವಿತರಿಸಲಾಯಿತು.
ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಸತ್ಯವತಿ, ಸಂಸದ ಎಂ.ಮಲ್ಲೇಶ್ಬಾಬು, ಶಾಸಕ ಕೆ.ವೈ.ನಂಜೇಗೌಡ, ಹೂಡಿ ವಿಜಯ್ಕುಮಾರ್, ಗ್ರಾಪಂ ಪಿಡಿಒ ಹರೀಂದ್ರ ಗೋಪಾಲ್, ಗ್ರಾಪಂ ಸದಸ್ಯ ಸಂಪಂಗೆರೆ ರಘು ಸೇರಿ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ದಾನಿಗಳಾದ ಕೋಡಿಹಳ್ಳಿ ಕೃಷ್ಣಾರೆಡ್ಡಿ, ಸಿಪಿಐ ಹರೀಶ್ರೆಡ್ಡಿ ಸೇರಿ ಹಲವರಿಂದ ಪುಳಿಯೊಗರೆ, ಪೊಂಗಲ್, ಉಪ್ಪಿಟ್ಟು, ಬಿಸಿ ಬಾದಾಮಿ ಹಾಲು ಉಚಿತ ಅನ್ನದಾಸೋಹ ವ್ಯವಸ್ಥೆ ಮಾಡಿ ಭಕ್ತಿ ಮೆರೆದರು.
ಅತಿ ಹೆಚ್ಚು ಆದಾಯ
ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯವು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು, ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ. ನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳ ಜತೆಗೆ ವೈಕುಂಠ ಏಕಾದಶಿ, ಬ್ರಹ್ಮರಥೋತ್ಸವ, ಶ್ರಾವಣಮಾಸ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವರ ದರ್ಶನ ಪಡೆದು ತಮ್ಮ ಹರಿಕೆ ಸಲ್ಲಿಸುತ್ತಿರುವ ಕಾರಣ ದೇವಾಲಯದ ವಾರ್ಷಿಕ ಆದಾಯವು 3 ಕೋಟಿ ರೂ. ಮೀರಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವ ದೇವಾಲಯವಾಗಿ ರೂಪುಗೊಂಡಿದೆ.