ಅಧಿಕ ಶ್ರಾವಣ ಮಾಸ: ಶಿಕಾರಿಪುರದ ಕ್ಷೇತ್ರಾಧಿಪತಿ ಹುಚ್ಚರಾಯಸ್ವಾಮಿ ದರ್ಶನಕ್ಕೆ ಭಕ್ತ ಸಾಗರ

6 ಎಸ್ಕೆಪಿ 1 d
ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ದರ್ಶನಕ್ಕೆ ಆಗಮಿಸಿದ ಭಕ್ತರ ದಂಡು.
Published on

ಶಿಕಾರಿಪುರ: ಅಧಿಕ ಶ್ರಾವಣ ಮಾಸದ ಪ್ರತಿ ಶನಿವಾರವೂ ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿ ದರ್ಶನಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹರಿದು ಬರುತ್ತಾರೆ. ಸ್ವಲ್ಪ ಮಳೆಯ ಕಾರಣದಿಂದ ಮೊದಲ ಶನಿವಾರ ಭಕ್ತರ ಸಂಖ್ಯೆ ಸ್ವಲ್ಪ ವಿರಳವಿತ್ತು. ಆದರೆ ಎರಡು ಮತ್ತು ಮೂರನೇ ಶನಿವಾರ ಸಾಗರದಂತೆ ಭಕ್ತ ಸಮೂಹ ಹರಿದು ಬಂದಿತ್ತು. ಮೂರನೇ ಶನಿವಾರವಂತೂ ಸುಮಾರು 20ರಿಂದ 25 ಸಾವಿರದಷ್ಟು ಭಕ್ತರು ಸ್ವಾಮಿಯ ದರ್ಶನ ಪಡೆದರು. ಭಾನುವಾರವೂ 6ರಿಂದ 8 ಸಾವಿರ ಭಕ್ತರು ಸ್ವಾಮಿಯ ದರ್ಶನಾಶೀರ್ವಾದ ಪಡೆದರು.

ಅಧಿಕ ಮಾಸದಲ್ಲಿ ಒಂದೇ ದಿನ ಆಂಜನೇಯ ಸ್ವಾಮಿಯ ಮೂರು ಕ್ಷೇತ್ರಗಳ ದರ್ಶನ ಮಾಡಿದರೆ, ಕಾಶಿ, ಬದರಿ, ಅಯೋಧ್ಯಾ, ರಾಮೇಶ್ವರ ಕ್ಷೇತ್ರಗಳನ್ನು ದರ್ಶನ ಮಾಡಿದಷ್ಟೇ ಪುಣ್ಯ ಎಂಬ ಪ್ರತೀತಿ ಶತ ಶತಮಾನಗಳಿಂದ ಇದೆ. ಅದರಂತೆ ಭಕ್ತರು ಜಾತಿ, ಮತ, ಪಂಥ ಬೇಧವಿಲ್ಲದೇ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶ್ರೀ ಶಾಂತೇಶ ಸ್ವಾಮಿಯ ದರ್ಶನ ಪಡೆದು, ನಂತರ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಶ್ರೀ ಕಾಂತೇಶ ಸ್ವಾಮಿಗೆ ಅಡ್ಡಬಿದ್ದು, ಕೊನೆಯದಾಗಿ ಶಿಕಾರಿಪುರದ ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿಯ ದರ್ಶನ ಮಾಡುತ್ತಾರೆ. ಕೆಲವರು ಮೊದಲು ಶಿಕಾರಿಪುರಕ್ಕೆ ಬಂದು ಸ್ವಾಮಿಯ ದರ್ಶನ ಮಾಡಿ, ನಂತರ ಸಾತೇನಹಳ್ಳಿಗೆ ಹೋಗಿ ಕೊನೆಗೆ ಕದರಮಂಡಲಗಿಯ ಶ್ರೀ ಕಾಂತೇಶ ಸ್ವಾಮಿಯ ದರ್ಶನ ಮಾಡುತ್ತಾರೆ.
ಅಧಿಕ ಮಾಸದಲ್ಲಿ ಪ್ರತಿ ಶನಿವಾರ ಮುಂಜಾನೆ 6ರಿಂದ ರಾತ್ರಿ 10ರ ತನಕ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ. ಪ್ರತಿದಿನ ಶ್ರೀ ಸೀತಾರಾಮಚಂದ್ರ ಮತ್ತು ಶ್ರೀ ಹುಚ್ಚರಾಯಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ ನೆರವೇರಿಸಲಾಗುತ್ತದೆ. ಶ್ರೀ ರಾಮರಕ್ಷಾ ಸ್ತೋತ್ರ ಪಾರಾಯಣ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಸೇರಿದಂತೆ ವಿವಿಧ ಸೇವಾ ಕೈಂಕರ್ಯಗಳು ನಿತ್ಯವೂ ನಡೆಯುತ್ತವೆ.

ಪ್ರತಿವರ್ಷ ಅಧಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶ್ರೀ ಹುಚ್ಚರಾಯಸ್ವಾಮಿ ನಾಸಿಕದ ಮೇಲೆ ಸಾಲಿಗ್ರಾಮ ಇರುವುದರಿಂದ ಅಧಿಕ ಮಾಸದಲ್ಲಿ ದರ್ಶನ ಮಾಡಿದರೆ ಅತ್ಯಂತ ಪುಣ್ಯದಾಯಕ ಎಂಬುದು ಭಕ್ತರ ನಂಬಿಕೆ. ಮೊದಲ ಶನಿವಾರಕ್ಕಿಂತ ಎರಡು ಮತ್ತು ಮೂರನೇ ಶನಿವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಭಾನುವಾರ ಸಹ ಭಕ್ತರ ಸಂಖ್ಯೆ ಹೆಚ್ಚಾಗಿರುವುದು ಈ ಬಾರಿಯ ವಿಶೇಷ.ಪ್ರಕಾಶ್ ಜನ್ನು, ವಿಎಚ್‌ಪಿ ತಾಲೂಕು ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net