ಭಕ್ತ ಕನಕದಾಸರ ಚಿಂತನೆಗಳು ಸಾರ್ವಕಾಲಿಕ: ಡಾ.ಮಂತರ್ ಗೌಡ

kanakadasa
Published on

ಮಡಿಕೇರಿ: ಕನ್ನಡ ನಾಡಿನ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಭಕ್ತ ಕನಕದಾಸರ ಕೊಡುಗೆ ಅಪಾರವಾಗಿದ್ದು, ಕನಕದಾಸರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ಕುರುಬ ಸಮಾಜದ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಇಂದಿನ ಮೊಬೈಲ್ ತಂತ್ರಜ್ಞಾನ ಯುಗದಲ್ಲಿಯೇ ಸಮಾಜದಲ್ಲಿ ಹಲವು ತಾರತಮ್ಯಗಳನ್ನು ನೋಡುತ್ತೇವೆ. ಆ ನಿಟ್ಟಿನಲ್ಲಿ ಹಲವು ಶತಮಾನಗಳ ಹಿಂದೆ ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಹಲವು ವಚನಕಾರರು, ಹಾಗೆಯೇ ದಾಸ ಶ್ರೇಷ್ಠ ಕನಕದಾಸರು ಸೇರಿದಂತೆ ಹಲವರು ಸಾಮಾಜಿಕ ನ್ಯೂನತೆಗಳನ್ನು ಸರಿಪಡಿಸಲು ಶ್ರಮಿಸಿರುವುದು ಶ್ಲಾಘನೀಯ ಕಾರ್ಯ. ಆ ನಿಟ್ಟಿನಲ್ಲಿ ಸಾಹಿತ್ಯ, ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದು ಡಾ.ಮಂತರ್ ಗೌಡ ಹೇಳಿದರು.


ಶರಣರು, ದಾಸರ ವಿಚಾರ ಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ದಾಸರ ಕೀರ್ತನೆಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಸಹಕಾರಿಯಾಗಿವೆ. ಅನ್ಯಾಯದ ವಿರುದ್ದ ಬೆಳಕು ಚೆಲ್ಲುವುದನ್ನು ಕಾಣುತ್ತೇವೆ. ಭಕ್ತಿ, ಶ್ರದ್ಧೆ, ಜ್ಞಾನ ಹೀಗೆ ಪ್ರತಿಯೊಂದು ಸಹ ಸಮತೋಲನದಿಂದ ಕೂಡಿದಾಗ ಉತ್ತಮ ಬದುಕು ನಡೆಸಲು ಸಾಧ್ಯ. ವಿದ್ಯಾರ್ಥಿಗಳು ವಿದ್ಯಾರ್ಜನೆ ಕಡೆ ಹೆಚ್ಚಿನ ಗಮನಹರಿಸಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು.


ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಆ ನಿಟ್ಟಿನಲ್ಲಿ ಕೂಡಲೇ ಜಾಗ ಒದಗಿಸಲಾಗುವುದು ಎಂದರು.


ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶರಣರು ಹಾಗೂ ದಾಸರ ಕೊಡುಗೆ ಅಪಾರ. ಕನಕದಾಸರು ಶೋಷಿತ ಜನರ ಬಗ್ಗೆ ಕೀರ್ತನೆ ಮೂಲಕ ಬೆಳಕು ಚೆಲ್ಲಿದ್ದಾರೆ. ಭಕ್ತ ಕನಕದಾಸ ಚಲನಚಿತ್ರದ ಮೂಲಕ ಕನಕದಾಸರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.


ಹುಣಸೂರು ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಆರ್.ರಾಶಿ ಮಾತನಾಡಿ, ಕನಕ ಎಂದರೆ ಚಿನ್ನ, ಭಕ್ತ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಮೌಡ್ಯವನ್ನು ಹೋಗಲಾಡಿಸಲು ಕನಕದಾಸರು ಪ್ರಯತ್ನಿಸಿದ್ದಾರೆ. ಕುಲಕುಲವೆಂದು ಹೊಡೆದಾಡದಿರಿ ಎಂಬ ಸಂದೇಶ ನೀಡಿದ್ದಾರೆ. ಕೀರ್ತನೆಗಳ ಮೂಲಕ ಬದುಕಿನ ಅಸಮತೋಲನ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು.


ಕನಕದಾಸರು ಸುಮಾರು ೩೧೬ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಕಾವ್ಯಕೃತಿಗಳ ಮೂಲಕ, ಕನಕದಾಸರು ತಮ್ಮ ವಿಶಿಷ್ಟ ಬರಹದಿಂದ ಇಂದಿಗೂ ಸಹ ಹೆಸರುವಾಸಿಯಾಗಿದ್ದಾರೆ ಎಂದು ಡಾ.ರಾಶಿ ಹೇಳಿದರು.


ಕುರುಬ ಸಮಾಜದ ಪ್ರಮುಖ ನಂಜುಂಡಸ್ವಾಮಿ ಮಾತನಾಡಿ, ಜ.೩ ರಂದು ಮುಖ್ಯಮಂತ್ರಿ ಅವರು ಕೊಡಗು ಜಿಲ್ಲೆಗೆ ಆಗಮಿಸಲಿದ್ದು, ಕುಶಾಲನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಕೋರಿದರು.


ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ತಹಶೀಲ್ದಾರ್ ಪ್ರವೀಣ್ ಕುಮಾರ್, ಕೊಡಗು ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಎಚ್.ಎಸ್.ಮಹೇಶ್, ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ, ಉಪಾಧ್ಯಕ್ಷರಾದ ಟಿ.ಕೆ.ವಸಂತ, ಖಜಾಂಜಿ ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net