ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಸಮಗ್ರ ತನಿಖೆಗೆ ಎಸ್ ಐಟಿ ರಚನೆಗೆ ಬಜರಂಗದಳ ಆಗ್ರಹ

bhajaranga dala
Published on

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಹಿಂದು ಸಂಘಟನೆಯ ಕಾರ್ಯಕರ್ತ ಪ್ರವೀಣ್ ನೆಟ್ಟಾರ್  ಪ್ರಕರಣವನ್ನು ವಿಶೇಷ ಪೊಲೀಸ್ ತನಿಖಾ ದಳಕ್ಕೆ (ಎಸ್ ಐಟಿ) ಒಪ್ಪಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸರ್ಕಾರವನ್ನು ಒತ್ತಾಯಿಸಿದೆ.

ಪ್ರವಿಣ್ ಹತ್ಯೆ ಯೋಜಿತ ಕೃತ್ಯವಾಗಿದೆ. ಇದರ ಹಿಂದಿರುವ ಆರೋಪಿಗಳನ್ನು ಶೀಘ್ರ ಬಂಧಿಸಲು ಎಸ್ ಐಟಿ ರಚನೆ ಮಾಡಬೇಕು. ಓರ್ವ ದಕ್ಷ ಪೊಲೀಸ್ ಅಧಿಕಾರಿಯನ್ನು ನೇಮಿಸಿ ತನಿಖೆ ನಡೆಸಬೇಕು ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಅವರು ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.


ಸರ್ಕಾರ ಎನ್ ಐಎ ಮೂಲಕ ತನಿಖೆ ಮಾಡಿದರೂ ಸ್ವಾಗತ. ಆದರೆ ಆದಷ್ಟು ಶೀಘ್ರ ಆರೋಪಿಗಳ ಬಂಧನವಾಗಬೇಕು. ಹಿಂದು ನಾಯಕರ ಹತ್ಯೆಯ ಮೂಲಕ ಸಮಾಜ ತುಂಡರಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲೇಬೇಕು.  ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವ ಮೂಲಕ ಮುಂದೆಂದೂ ಇಂತಕ ಕೃತ್ಯಗಳು ಮರುಕಳಿಸಬಾರದು.  ಆಡಳಿದಲ್ಲಿ ಪಕ್ಷ ಯಾವುದೇ ಇರಲಿ, ಹಿಂದುತ್ವ ಮರೆತಾಗ ಎಚ್ಚರಿಸುವ ಕೆಲಸ ಮಾಡಿಯೇ ಮಾಡುತ್ತೇವೆ.‌ ಸರ್ಕಾರ  ಪ್ರವೀಣ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು. 

ಮೃತ ಪ್ರವೀಣ್ ನೆಟ್ಟಾರ್ ಅಂತಿಮ ಶವಯಾತ್ರೆ ಸಂದರ್ಭ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಅಮಾಯಕ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ. ನಿಯಮ ಮೀರಿ ವರ್ತಿಸಿದ ಪೊಲೀಸರನ್ನು ಅಮಾನತು ಮಾಡಬೇಕು. ಗೃಹ ಸಚಿವರು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಪ್ರವೀಣ್ ಹತ್ಯೆಯಿಂದ ಇಡೀ ರಾಜ್ಯದಲ್ಲಿ ನೋವಿನ ವಾತಾವರಣ ನಿರ್ಮಾಣವಾಗಿದೆ. ಹಿಂದು ಕಾರ್ಯಕರ್ತನೊಬ್ಬನ ಅಗಲಿಕೆ ಇಡೀ ಸಮಾಜಕ್ಕೆ ಆದ ನಷ್ಟವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಶುಕ್ರವಾರ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಮಂಗಳೂರು ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಪುತ್ತೂರು ವಿಭಾಗ ಸಂಚಾಲಕ ಭರತ್ ಕುಮ್ಡೇಲು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net