ಭಜನಾ ಮಾರ್ಗದಿಂದ ಪರಿವರ್ತನೆ

bhajane new
Published on

ಪುತ್ತೂರು: ಭಜನಾ ಮಾರ್ಗದಿಂದ ಮಾತ್ರ ಪರಿವರ್ತನೆ ಸಾಧ್ಯ. ಭಜನೆ ವೈಯಕ್ತಿಕ ಹಾಗೂ ಸಾಮಾಜಿಕ ಜಾಗೃತಿಗೆ ಮಾಧ್ಯಮ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಮಾತೃಶ್ರೀ ಹೇಮಾವತಿ ವಿ. ಹೆಗಡೆ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಭಜನಾ ಸತ್ಸಂಗ ಸಮಾವೇಶ ಸಮಿತಿ ಪುತ್ತೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಸಹಯೋಗದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಶನಿವಾರ ಬೃಹತ್ ಭಜನಾ ಸತ್ಸಂಗ ಸಮಾವೇಶದಲ್ಲಿ ಮಾತನಾಡಿದರು.

ನಾವು ಎಷ್ಟೇ ದೊಡ್ಡವರಾದರೂ ಹೆತ್ತವರಿಗಿಂತ ದೊಡ್ಡವರಲ್ಲ. ನಮಗೆ ಇಲ್ಲಿಯೇ ಸ್ವರ್ಗ ನಿರ್ಮಾಣ ಮಾಡುವ ಅವಕಾಶವನ್ನು ದೇವರು ಕೊಟ್ಟಿದ್ದಾನೆ. ಭಕ್ತಿ, ಭಾವದೊಂದಿಗಿನ ಶ್ರದ್ಧೆಯ ಸ್ತುತಿಗೆ ಭಗವಂತನ ಅನುಗ್ರಹ ಸಿಗುತ್ತದೆ ಎಂದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ಶಕುಂತಳಾ ಟಿ. ಶೆಟ್ಟಿ, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಸತ್ಸಂಗ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಧನ್ಯಕುಮಾರ್ ಬೆಳಿಯೂರುಗುತ್ತು ಸ್ವಾಗತಿಸಿದರು. ಸಂಚಾಲಕ ಶಶಿಕುಮಾರ್ ಬಾಲ್ಯೊಟ್ಟು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು.

ಶಿವ ಪಂಚಾಕ್ಷರಿ ಜಪಯಜ್ಞ: ಮಧ್ಯಾಹ್ನ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳು ಹಾಗೂ ಭಜಕರಿಂದ ನಗರದಲ್ಲಿ ದೇವರ ನಾಮ ಸಂಕೀರ್ತನೆ ಯಾತ್ರೆ ನಡೆಯಿತು. ಸಹಸ್ರಾರು ಮಂದಿ ಭಾಗವಹಿಸಿದ್ದರು. ಸಂಜೆ ಪ್ರಧಾನ ವೇದಿಕೆಯಲ್ಲಿ ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಜಪಯಜ್ಞ ನಡೆಯಿತು. ಭಜನೆ ಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ ನೇತೃತ್ವದಲ್ಲಿ ಸಾವಿರಾರು ಭಜಕರು 108 ಶಿವ ಜಪಗಳನ್ನು ಉಚ್ಛರಿಸಿದರು.

ಪುತ್ತೂರಿನಲ್ಲಿ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ಭಜನಾ ಸತ್ಸಂಗ ನಡೆದಿದೆ. ಶಾಶ್ವತ ಪರಿಣಾಮದ ಕಾರ್ಯಕ್ರಮವೊಂದು ದೊಡ್ಡ ಜನಸಂಖ್ಯೆಯ ಪಾಲ್ಗೊಳ್ಳುವಿಕೆಯಿಂದ ನಡೆದಿರುವುದು ಖುಷಿ ನೀಡಿದೆ. ಭಜನೆಗೆ ಸಂಬಂಧಿಸಿದ ಕೆಲವು ಬೇಡಿಕೆಗಳು ಸರ್ಕಾರ ಸಲ್ಲಿಕೆಯಾಗುವ ಮಟ್ಟಕ್ಕೆ ಪರಿಷತ್ ಬೆಳೆದಿರುವುದು ಶ್ಲಾಘನೀಯ.

ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ

10 ಬೇಡಿಕೆ ಸರ್ಕಾರಕ್ಕೆ ಸಲ್ಲಿಕೆ: ಭಜನಾ ಮಂದಿರಗಳು ಇರುವ ಸ್ಥಳವನ್ನು ಸಕ್ರಮಗೊಳಿಸಿ ಮಂದಿರಗಳ ಹೆಸರಿಗೆ ನೀಡಬೇಕು. ಭಜನಾ ಪರಿಷತ್‌ಗೆ ಭಜನಾ ಅಕಾಡೆಮಿ ಗೌರವ ನೀಡಬೇಕು, ಹನುಮ ಜಯಂತಿ ದಿನವನ್ನು ಭಜನಾ ದಿನವಾಗಿ ಆಚರಿಸಲು ಘೋಷಣೆ ಮಾಡಬೇಕು ಮೊದಲಾದ 10 ಬೇಡಿಕೆಗಳನ್ನು ಸತ್ಸಂಗ ಸಮಾವೇಶದಲ್ಲಿ ಶಾಸಕ ಸಂಜೀವ ಮಠಂದೂರು ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಭಜನಾ ಪರಿಷತ್ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ ಬೇಡಿಕೆಯನ್ನು ಓದಿದರು.

1680 ಭಜನಾ ತಂಡಗಳು

1680 ಭಜನಾ ತಂಡಗಳ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಸಾರ್ವಜನಿಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಜನಾ ಪ್ರೇಮಿಗಳು ನೆರೆದಿದ್ದರು. ಕೇಸರಿ ಶಾಲು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಜಕರು ಹಾಗೂ ಭಜನಾ ಪ್ರೇಮಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು. ಓಂ ನಮಃ ಶಿವಾಯ ಎಂಬ ಶಿವ ಪಂಚಾಕ್ಷರಿ ಮಂತ್ರದ ಪಠಣ ಒಂದು ಕೋಟಿ ಬಾರಿ ಅನುರಣಗೊಂಡಿತು. ಸಂಕೀರ್ತನಾ ಯಾತ್ರೆಯಲ್ಲಿ 2 ತಂಡಗಳ ಸಾಮೂಹಿಕ ಭಜನೆ ಹಾಗೂ 2 ತಂಡಗಳ ಕುಣಿತದ ಭಜನೆಗಳ ಸಂದರ್ಭ ಭಜಕರ ಜತೆಗೆ ನೆರೆದವರೂ ಭಾವ ಪರವಶರಾಗಿ ಧ್ವನಿಗೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net