ಭಜನೆಯಿಂದ ಮನಸ್ಸಿನ ದೋಷ ಮಾಯ

Swaranavallee sri
Published on

ಶಿರಸಿ: ಭಜನೆಯಿಂದ ಮನಸ್ಸಿನ ದೋಷ ಹೋಗುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು.

ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿತ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಗುರು ಸೇವೆ ಸಲ್ಲಿಸಿದ ಮರಾಠಿ ಸಮಾಜದ ಶಿಷ್ಯರನ್ನು ಉದ್ದೇಶಿಸಿ ಗುರುವಾರ ಆಶೀರ್ವಚನ ನೀಡಿದರು.

ಭಜನೆ ಮಾಡಿದರೆ ಅದೃಷ್ಟ ಹಾಗೂ ದೃಷ್ಟ ಎರಡೂ ಪ್ರಯೋಜನ ಇದೆ. ಭಜನೆ ಮಾಡುವ ವ್ಯಕ್ತಿಗೆ ಒಳ್ಳೆಯ ಆರೋಗ್ಯ ಪಡೆಯಲು ಕಾರಣವಾಗುತ್ತದೆ. ಆನಂದ, ನೆಮ್ಮದಿಗಾಗಿ ಭಜನೆ ಮಾಡಬೇಕು. ಸಾಂಸಾರಿಕ ಚಿಂತನೆ ಇದ್ದರೂ ಕೂಡ ದೂರವಾಗುತ್ತದೆ ಎಂದು ಶ್ರೀಗಳು ಹೇಳಿದರು.

ತೀರ್ಥ ಕ್ಷೇತ್ರಗಳಿಗೆ, ಮಠಗಳಿಗೆ ವರ್ಷಕ್ಕೊಮ್ಮೆಯಾದರೂ ಹೋಗಬೇಕು. ಇಂಥ ಕ್ಷೇತ್ರಗಳಿಗೆ ತೆರಳಿದಾಗ ಮನಸ್ಸಿನಲ್ಲಿ ಶ್ರದ್ಧಾ ಭಾವನೆ ಬರುತ್ತದೆ. ಪವಿತ್ರ ಕ್ಷೇತ್ರದಲ್ಲಿ ಶ್ರದ್ಧಾ ಭಾವದಿಂದ ಇದ್ದರೆ ಪ್ರಧಾನವಾಗಿ ಮೂರು ಪ್ರಯೋಜನ ಆಗುತ್ತದೆ. ತೀರ್ಥ ಕ್ಷೇತ್ರ, ಮಠಗಳಿಗೆ ಶಕ್ತಿ ಇರುತ್ತವೆ. ಮಠಗಳಲ್ಲಿ ತಪಸ್ವಿಗಳು ತಪಸ್ಸು ಮಾಡುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳು, ಯಜ್ಞಗಳು ಆಗಾಗ ನಡೆಯುತ್ತಿರುತ್ತವೆ. ಆ ಪ್ರಭಾವ ನಮ್ಮ ಮೇಲೆ ಪರಿಣಾಮ ಬೀರುತ್ತವೆ ಎಂದು ಶ್ರೀಗಳು ತಿಳಿಸಿದರು.

ಸಮಾಜದ ಪ್ರಮುಖ ಸೋಮು ಮರಾಠಿ, ಎಲ್ಲ ಊರಿನಿಂದಲೂ ಮಠಕ್ಕೆ ಚಾತುರ್ಮಾಸ್ಯದ ಅವಧಿಯಲ್ಲಿ ಬರಬೇಕು. ಸಮಸ್ಯೆಗಳಿದ್ದರೂ ಮಾತನಾಡಿ ಸರಿ ಮಾಡಿಕೊಳ್ಳಬೇಕು ಎಂದರು.

ನಾರಾಯಣ ಮರಾಠಿ, ಸಂತೋಷ ಮರಾಠಿ ಯಲ್ಲಾಪುರ, ಮಂಜುನಾಥ ಮರಾಠಿ ಮಂಜುಗುಣಿ, ಗೋಪಾಲ ಮರಾಠಿ ಮಾನಿಮನೆ, ಯಶವಂತ ಪಾಟೀಲ ತಾಟವಾಳ, ಉದಯ ಮರಾಠಿ ದೇವನಳ್ಳಿ, ಶಿರಸಿ, ಹೊನ್ನಾವರ, ಯಲ್ಲಾಪುರ, ಕುಮಟಾ ಮತ್ತಿತರೆಡೆಯಿಂದ ಮರಾಠಿ ಸಮಾಜದ ಶಿಷ್ಯರು ಆಗಮಿಸಿದ್ದರು.

ಮಠದಲ್ಲಿ ಕೊಡುವ ತೀರ್ಥ ಪ್ರಸಾದಕ್ಕೆ ಅದರದ್ದೇ ಆದ ಮಹತ್ವ ಇದೆ. ಭಗವಂತನ ಅಭಿಷೇಕದ ಜಲವೇ ತೀರ್ಥ. ಪೂಜಿಸುವ ಸಾಲಿಗ್ರಾಮಕ್ಕೆ ತುಳಸಿ, ಗಂಧ ಸಮರ್ಪಿಸಿ ಪವಿತ್ರೀಕರಿಸುವ, ಶಂಖದಿಂದ ಅಭಿಷೇಕ ಮಾಡಿದಾಗ ಅದು ತೀರ್ಥವಾಗುತ್ತದೆ. ಈ ವೇಳೆ ಘಂಟಾ ನಾದ, ಪುರುಷ ಸೂಕ್ತ ಪಠಣ ಕೂಡ ಇರುತ್ತವೆ. ಅಭಿಷೇಕ ಮಾಡುವ ತೀರ್ಥ ತಾಮ್ರದ ಪಾತ್ರೆಯಲ್ಲಿರುತ್ತದೆ. ಹಾಗೂ ಚಂದ್ರಮೌಳೇಶ್ವರ, ಶ್ರೀಚಕ್ರದ, ಅಮ್ಮನವರ ಅಭಿಷೇಕದ ಜಲ ಕೂಡ ಈ ತೀರ್ಥದಲ್ಲಿ ಇರುತ್ತದೆ. ಶ್ರದ್ಧೆಯಿಂದ ತೀರ್ಥ ತೆಗೆದುಕೊಂಡರೆ ನಮ್ಮೊಳಗೆ ಇರುವ ಅನೇಕ ಪಾಪ ಕಳೆದು ಬದುಕು ಪಾವನ ಆಗುತ್ತದೆ. I ಸ್ವರ್ಣವಲ್ಲೀ ಶ್ರೀ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net