ಉಳ್ಳಾವಳ್ಳಿಯಲ್ಲಿ ಭೈರವೇಶ್ವರಸ್ವಾಮಿ ಕಂಬೋತ್ಸವ

02 HRS 01
ಹಿರೀಸಾವೆ ಹೋಬಳಿ ಉಳ್ಳಾವಳ್ಳಿ ಗ್ರಾಮದಲ್ಲಿ ಭೈರವೇಶ್ವರಸ್ವಾಮಿಯ ಹಬ್ಬದ ಪ್ರಯುಕ್ತ ಕಂಬೋತ್ಸವ ವೈಭವದಿಂದ ನಡೆಯಿತು.
Published on

ಹಿರೀಸಾವೆ: ಹೋಬಳಿಯ ಉಳ್ಳಾವಳ್ಳಿ ಗ್ರಾಮದಲ್ಲಿ ಶ್ರೀ ಭೈರವೇಶ್ವರಸ್ವಾಮಿಯ ಹಬ್ಬದ ಪ್ರಯುಕ್ತ ಸೋಮವಾರ ರಾತ್ರಿ ಮಂಗಳವಾದ್ಯದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಬಾಳೆಕಂಬ ತರುವ ಮೂಲಕ ಹಬ್ಬ ಹಾಗೂ ರಂಗಕುಣಿತಕ್ಕೆ ಚಾಲನೆ ದೊರೆತಿದ್ದು ಏ.1 ರಿಂದ ಏ.7 ರವರೆಗೆ ಪ್ರತಿನಿತ್ಯ ಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ, ನಿತ್ಯರಾತ್ರಿ ರಂಗದ ಬೀದಿಯಲ್ಲಿ ರಂಗಕುಣಿತ, ಹಾಸ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಕಂಬೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಶ್ರೀ ಭೈರವೇಶ್ವರಸ್ವಾಮಿ ದೇಗುಲಕ್ಕೆ ಹೂವಿನ ಚಪ್ಪರ ಹಾಕಲಾಯಿತು. ರಂಗಮಂಟಪ ಹಾಗೂ ರಂಗದ ಬೀದಿಯನ್ನು ಸ್ವಚ್ಛಗೊಳಿಸಿ ನೀರು ಹಾಯಿಸಿದ್ದು ಬಾಳೆಕಂದು, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಸಂಜೆ 7.15 ರಲ್ಲಿ ಶ್ರೀ ಭೈರವೇಶ್ವರಸ್ವಾಮಿ ದೇಗುಲದಿಂದ ಕಂಬೋತ್ಸವವು ಮಂಗಳವಾದ್ಯದೊಂದಿಗೆ ಆರಂಭಗೊಂಡು ಆಂಜನೇಯಸ್ವಾಮಿ ಸನ್ನಿಧಿ, ಮಾಸ್ತಿಯಮ್ಮ ದೇಗುಲ ಹಾಗೂ ಮರಕುದುರೆ ಸನ್ನಿಧಿಯ ಮೂಲಕ ಸಾಗಿತು. ಹೆಣ್ಣು ಮಕ್ಕಳು ಆರತಿ ಹಿಡಿದು ಸಾಗಿದರು. ಜೈಕಾರದೊಂದಿಗೆ ಕಂಬೋತ್ಸವ ಸಾಗಿದಂತೆಲ್ಲ ಭಕ್ತರು ಹೆಜ್ಜೆಗೊಂದು ಈಡುಕಾಯಿ ಹಾಕಿದರು.

ಗ್ರಾಮದ ಹೆಬ್ಬಾಗಿಲಿಗೆ ವಿಶೇಷವಾದ ಪೂಜೆ ಸಲ್ಲಿಸಿ ಮರಕುದುರೆ ದೇವಾಲಯಕ್ಕೆ ತೆರಳಿದ ನಂತರ ಶ್ರೀ ಹುಚ್ಚಮ್ಮದೇವಿ ಸನ್ನಿಧಿಯನ್ನು ಬಳಸಿ ರಂಗ ಮಂಟಪದ ಬಳಿಗೆ ರಾತ್ರಿ 9.30 ಕ್ಕೆ ಕಂಬೋತ್ಸವ ಆಗಮಿಸಿತು. ರಂಗಮಂಟಪದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಬಂದ ಬಳಿಕ ಮಂದಿರದ ಒಳಗೆ ಕಂಬವನ್ನು ಪ್ರತಿಷ್ಠಾಪಿಸಲಾಯಿತು.

ರಂಗಕುಣಿತ: ಹಬ್ಬದ ಆಚರಣೆಯಲ್ಲಿ ರಂಗಕುಣಿತ ವಿಶೇಷವಾಗಿದ್ದು 7 ದಿನಗಳ ಕಾಲ ಪ್ರತಿನಿತ್ಯವೂ ರಂಗ ಕುಣಿತ ಜರುಗಲಿದೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಸದಸ್ಯ ಉಮೇಶ್, ಪ್ರಮುಖರಾದ ಕಾಂತರಾಜ್, ತ್ಯಾಗರಾಜ್, ರಾಮಚಂದ್ರ, ಕೃಷ್ಣೇಗೌಡ, ಅಣ್ಣಪ್ಪಸ್ವಾಮಿಗೌಡ, ಆನಂದ್, ಮಹೇಶ್, ರಘುನಾಥ್, ಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net