

ಹಿರೀಸಾವೆ: ಹೋಬಳಿಯ ಉಳ್ಳಾವಳ್ಳಿ ಗ್ರಾಮದಲ್ಲಿ ಶ್ರೀ ಭೈರವೇಶ್ವರಸ್ವಾಮಿ ಹಬ್ಬದ ಪ್ರಯುಕ್ತ ಕಳಶೋತ್ಸವ ಭಾನುವಾರ ಮಂಗಳವಾಧ್ಯದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ದೇಗುಲ ಹಾಗೂ ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ, ರಂಗ ಮಂಟಪ್ಪ ಹಾಗೂ ರಂಗದ ಬೀದಿಯನ್ನು ಬಾಳೆಕಂದು, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಮುಂಜಾನೆಯಿಂದಲೇ ಭಕ್ತರು ಶ್ರೀ ಭೈರವೇಶ್ವರಸ್ವಾಮಿ ಸನ್ನಿಧಿಗೆ ಆಗಮಿಸಿದ್ದರು. ಭೈರವನಿಗೆ ಅಭಿಷೇಕ, ಏಕವಾರು ಅಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ ಹಾಗೂ ಪುಷ್ಪಾಲಂಕಾರ ನಡೆಯಿತು. ಭಕ್ತರು ಹೂವು, ಹಣ್ಣು-ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿದರು.
ಸಂಜೆ 4 ಗಂಟೆಗೆ ಶ್ರೀ ಭೈರವೇಶ್ವರಸ್ವಾಮಿ ದೇಗುಲದಿಂದ ಕಳಶೋತ್ಸವವು ಆರಂಭಗೊಂಡು, ಆಂಜನೇಯಸ್ವಾಮಿ ಸನ್ನಿಧಿ, ಮಾಸ್ತಿಯಮ್ಮ ದೇವಿಯ ಗುಡಿಯತ್ತಾ ಸಾಗಿತು. ನೂರಾರು ಭಕ್ತರ ಜೈಕಾರದೊಂದಿಗೆ ಕಳಶೋತ್ಸವವು ಸಾಗಿದಂತೆ ಭಕ್ತರು ಈಡುಕಾಯಿ ಹೊಡೆದರು.
ಗ್ರಾಮದ ಹೆಬ್ಬಾಗಿಲಿಗೆ ವಿಶೇಷವಾದ ಪೂಜೆ ಸಲ್ಲಿಸಿ ಮರಕುದುರೆ ದೇವಾಲಯಕ್ಕೆ ತೆರಳಿ, ನಂತರ ಶ್ರೀ ಹುಚ್ಚಮ್ಮದೇವಿ ಸನ್ನಿಯನ್ನು ಬಳಸಿ ರಂಗ ಮಂಟಪದ ಬಳಿಗೆ ಕಳಶೋತ್ಸವವು ಆಗಮಿಸಿತು. ಕಳಶೋತ್ಸವದಲ್ಲ್ಲಿಗ್ರಾಮದೇವತೆ ಶ್ರೀ ಹುಚ್ಚಮ್ಮ ದೇವಿಯು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಂತರ ರಂಗದ ಬೀದಿಗೆ ಆಗಮಿಸಿ ರಂಗಮಂಟಪದ ಸುತ್ತ ಮೂರು ಬಾರಿ ಕಳಶೋತ್ಸವ ಪ್ರದಕ್ಷಣೆ ಬಂದ ಬಳಿಕ ಕಳಶ ಪ್ರತಿಷ್ಠಾಪಿಸಲಾಯಿತು.
ಕಳಶವನ್ನು ಪ್ರತಿಷ್ಠಾಪಿಸುತಿದ್ದಂತೆ ನೆರೆದಿದ್ದ ಹೆಣ್ಣು ಮಕ್ಕಳು ಹಲಸಿನ ಹಣ್ಣು, ಬಾಳೆಹಣ್ಣು ದವನ ಹಾಗೂ ವಿವಿಧ ಪುಷ್ಪ-ಪತ್ರೆಗಳನ್ನು ಮಂಟಪದತ್ತಾ ಎಸೆದರು. ಎಸೆದ ಹಣ್ಣುಗಳನ್ನು ಭೈರವೇಶ್ವರನ ಪ್ರಸಾದವೆಂದು ಭಾವಿಸುವ ಭಕ್ತರು ಭಕ್ತಿಯಿಂದ ಆಯ್ದುಕೊಂಡು ಸೇವಿಸಿದರು. ಇದರಿಂದ ಆರೋಗ್ಯ, ಆಯಸ್ಸು ಹಾಗೂ ಐಶ್ವರ್ಯ ಹೆಚ್ಚಾಗಲಿದ್ದು, ತಮಗೆ ಬಂದಿರುವ ಕಷ್ಟ ಕಾರ್ಪಣ್ಯಗಳು ದೂರಾಗುವ ಬಗ್ಗೆ ದೃಢವಾದ ನಂಬಿಕೆ ಇದೆ.