

ಸಕಲೇಶಪುರ : ಬೆಟ್ಟದ ಭೈರವೇಶ್ವರ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಹಾನುಬಾಳು ಹೋಬಳಿ ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದ ಭೈರವೇಶ್ವರ ದೇವಾಲಯದ ಬಳಿ ನಿರ್ಮಾಣಗೊಳ್ಳುತ್ತಿರುವ ವೀಕ್ಷಣೆ ಗೋಪುರ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಭೈರವೇಶ್ವರ ದೇವಸ್ಥಾನವು ಈ ಭಾಗದಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ. ಈ ಭಾಗದಲ್ಲಿ ಪ್ರಕೃತಿ ಸೌಂದರ್ಯವನ್ನು ವೀಕ್ಷಣೆ ಮಾಡಲು ವೀಕ್ಷಣಾ ಗೋಪುರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಜತೆಗೆ ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಶೌಚಗೃಹ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗುವುದು. ದೇವಸ್ಥಾನಕ್ಕೆ ಬರುವ ರಸ್ತೆ ಕೆಲವೆಡೆ ಹದಗೆಟ್ಟಿದ್ದು ಇದನ್ನು ಸಹ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು. ದೇವಸ್ಥಾನದ ಆವರಣದಲ್ಲಿ ಹೊರ ಊರುಗಳಿಂದ ಬರುವ ಕೆಲವು ಪ್ರವಾಸಿಗರು ದುವರ್ತನೆ ತೋರುತ್ತಾರೆ ಹಾಗೂ ದೇವಸ್ಥಾನದ ಆವರಣಕ್ಕೆ ಚಪ್ಪಲಿ ಧರಿಸಿ ಬರುತ್ತಾರೆ ಎಂಬ ದೂರುಗಳಿದ್ದು ಈ ನಿಟ್ಟಿನಲ್ಲಿ ಇಲ್ಲಿಗೆ ಪ್ರವಾಸಿತಾಣಕ್ಕೆ ಪೊಲೀಸ್ ಒಬ್ಬರನ್ನು ನಿಯೋಜಿಸಲಾಗುವುದು. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಸ್ವಚ್ಛತೆಯನ್ನು ಕಾಪಾಡಿ ದೇಗುಲದ ಗೌರವಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸಬೇಕು ಎಂದರು.
ವಲಯ ಅರಣ್ಯಧಿಕಾರಿ ಹೇಮಂತ್, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.