

ಕೊಪ್ಪಳ: ತಾಲೂಕಿನ ಭಾಗ್ಯನಗರ ಪಟ್ಟಣವನ್ನು ಕೊಪ್ಪಳ ನಗರಸಭೆಗೆ ಸೇರಿಸುವಂತೆ ಒತ್ತಾಯಿಸಿ ಮಾಜಿ ಸದಸ್ಯ ಮಂಜುನಾಥ ಗೊಂಡಬಾಳ ಶುಕ್ರವಾರ ತಹಸೀಲ್ದಾರ್ ವಿಠ್ಠಲ ಚೌಗಲಾ ಮೂಲಕ ಸಚಿವರಿಗೆ ಮನವಿ ಸಲ್ಲಿಸಿದರು.
ಭಾಗ್ಯನಗರವನ್ನು ಗ್ರಾಮ ಪಂಚಾಯತಿಯಿಂದ ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯತಿಯನ್ನಾಗಿ 2016ರಲ್ಲಿ ಸ್ಥಾಪಿಸಲಾಗಿದೆ. ಒಂದು ಅವಧಿ ಪೂರ್ಣಗೊಂಡು ಎರಡನೇ ಅವಧಿಯ ಚುನಾವಣೆ ಆದರೂ ಇದೂವರೆಗೆ ಅದು ಜಾರಿಗೆ ಬಂದಿಲ್ಲ. ಸದರಿ ಭಾಗ್ಯನಗರ ಪಟ್ಟಣ ಪಂಚಾಯತಿಯನ್ನು ಇಲ್ಲಿಗೆ ಮುಕ್ತಾಯಗೊಳಿಸಿ ಅದನ್ನು ಕೊಪ್ಪಳ ನಗರಸಭೆಗೆ ಸೇರಿಸುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪೌರಾಡಳಿತ ನಗರ ಮೂಲಸೌಕರ್ಯ ಸಚಿವರಿಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.