ವಿಜಯವಾಣಿ ಸುದ್ದಿಜಾಲ ತುಮಕೂರು
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ "ಭಾಗ್ಯಲಕ್ಷ್ಮೀ' ಯೋಜನೆಗೆ ಈಗ 18 ವರ್ಷದ ಹರೆಯ. ಈ ಮಹತ್ವಾಕಾಂಕ್ಷೆ ಯೋಜನೆ ಆರಂಭದ 2382 ಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿದ್ದು, ಅಗತ್ಯ ದಾಖಲೆ ನೀಡಿ ಸೌಲಭ್ಯ ಪಡೆಯಬೇಕಿದೆ. ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-&07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ "ಭಾಗ್ಯಲಕ್ಷ್ಮೀ' ಎಂಬ ಹೊಸ ಯೋಜನೆಯನ್ನು ಅಂದಿನ ರಾಜ್ಯ ಸರ್ಕಾರ ಜಾರಿಗೊಳಿಸಿತ್ತು. ಯೋಜನೆಯಡಿ 2006ರಲ್ಲಿ ನೋಂದಾಯಿಸಿಕೊಂಡ ಕುಟುಂಬದ ಮೊದಲ ಹೆಣ್ಣು ಮಗು ಹೆಸರಿನಲ್ಲಿ 19,300 ರೂಪಾಯಿ ಹಾಗೂ ಅದೇ ಕುಟುಂಬದ 2ನೇ ಹೆಣ್ಣು ಮಗುವಿನ ಹೆಸರಿನಲ್ಲಿ 18,350 ರೂಪಾಯಿ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ರಾಜ್ಯ ಸರ್ಕಾರ ಠೇವಣಿ ಇಟ್ಟಿದ್ದು, ಈಗ 18 ವರ್ಷ ಪೂರ್ಣಗೊಳಿಸಿರುವ 2,382 ಯುವತಿಯರು ತಲಾ 1 ಲಕ್ಷ ರೂಪಾಯಿ ಪರಿಪಕ್ವ ಮೊತ್ತ ಪಡೆಯಲಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 2024 ಏಪ್ರಿಲ್ನಿಂದ 2025 ಮಾರ್ಚ್ ವರೆಗೂ ಬರೋಬ್ಬರಿ 13,463 ಹೆಣ್ಣು ಮಕ್ಕಳು ಪರಿಪಕ್ವ ಮೊತ್ತವನ್ನು ಪಡೆಯಲು ಅರ್ಹತೆ ಪಡೆಯಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅಗತ್ಯ ಮಾಹಿತಿ, ದಾಖಲಾತಿಗಳನ್ನು ಒದಗಿಸುವ ಮೂಲಕ ಸೌಲಭ್ಯ ಪಡೆಯಬಹುದಾಗಿದೆ.
ಕೆಲವು ಲಾನುಭವಿಗಳು ಮೂಲ ಬಾಂಡ್ ಕಳೆದುಕೊಂಡಿದ್ದರೂ ಹಣ ಪಡೆಯಲು ಅವಕಾಶ ನೀಡಲಾಗಿದ್ದು, ಬಾಂಡ್ ನಕಲು ಪ್ರತಿ ಅಥವಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದಾಖಲಿಸಿರುವ ಪ್ರಥಮ ವರ್ತಮಾನ ವರದಿ ನೀಡಬಹುದು. ಬಾಂಡ್ ನಕಲು ಪ್ರತಿ ಕೂಡ ಕಳೆದು ಹೋಗಿದ್ದರೆ ಆನ್ಲೈನ್ನಲ್ಲಿ ಇರುವ ಪ್ರತಿಗೆ ಸಿಡಿಪಿಒ ಅವರಿಂದ ದೃಢೀಕರಿಸಿ ಸಲ್ಲಿಸಲು ಅವಕಾಶವಿದೆ.
ಬೇಕಾದ ದಾಖಲೆಗಳು: ಪ್ರಸ್ತುತ ಜಿಲ್ಲೆಯಲ್ಲಿ 2382 ಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿದ್ದು, ಭಾಗ್ಯಲಕ್ಷ್ಮೀ ಪರಿಪಕ್ವ ಮೊತ್ತ ಪಡೆಯಲು ಅರ್ಹರಾಗಿದ್ದು, ದಾಖಲೆಗಳನ್ನು ನೀಡಿ ತಲಾ 1 ಲಕ್ಷ ರೂ. ಪಡೆಯಬಹುದಾಗಿದೆ. ಯೋಜನೆಯ ಆರಂಭದಲ್ಲಿ ಎಲ್ಐಸಿ ಸಂಸ್ಥೆಯ ಬಾಂಡ್ ನೀಡಿದ್ದರಿಂದ ಈ ಸಂಸ್ಥೆಯಿಂದ ನೀಡಲಾದ ನಮೂನೆ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ, ಭಾಗ್ಯಲಕ್ಷಿ$್ಮ ಮೂಲ ಬಾಂಡ್, ಜನನ ಪ್ರಮಾಣಪತ್ರ, ಹೆಸರು ಬದಲಾಗಿದ್ದರೆ ಸಿಡಿಪಿಒ ಅವರಿಂದ ದೃಢೀಕರಣ ಪ್ರತಿ, ವ್ಯಾಸಂಗ ಪ್ರಮಾಣಪತ್ರ, ದತ್ತು ಮಕ್ಕಳು ಇದ್ದಲ್ಲಿ ಕಾನೂನಾತ್ಮಕವಾಗಿ ದತ್ತು ಪಡೆದ ಪಾಲಕರ ಹೆಸರು ಸಿಡಿಪಿಒ ಅವರಿಂದ ದೃಢೀಕರಿಸಿ ನೀಡಬಹುದು. ಬಾಂಡ್ಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸಲು ಆಯಾ ತಾಲೂಕು ಸಿಡಿಪಿಒಗೆ ಅವಕಾಶ ನೀಡಲಾಗಿದ್ದು, ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಸಂಪರ್ಕಿಸಿ ಯೋಜನೆಯ ಪರಿಪಕ್ವ ಹಣ ಪಡೆಯಬಹುದು.
3 ವರ್ಷವಾದರೂ ಸಿಗದ "ಪಾಸ್ಪುಸ್ತಕ'
ಯೋಜನೆ ಘೋಷಣೆಯಾದ ನಂತರದ ವರ್ಷದಲ್ಲಿ ಸಾಕಷ್ಟು ಮಾರ್ಪಾಡುಗಳೊಂದಿಗೆ ಪ್ರಸ್ತುತ ಅಂಚೆ ಇಲಾಖೆಯ ಸುಕನ್ಯ ಸಮೃದ್ಧಿ ಯೋಜನೆಯೊಂದಿಗೆ ಸೇರಿಸಿ ಪಾಸ್ಪುಸ್ತಕ ನೀಡಲಾಗುತ್ತಿದೆ. 18 ತಿಂಗಳು ಪೂರ್ಣಗೊಂಡ ಹೆಣ್ಣು ಮಕ್ಕಳ ಪಾಲಕರು ಆಯಾ ಅಂಗನವಾಡಿಯಲ್ಲಿ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಪಾಸ್ಪುಸ್ತಕ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಾಧ್ಯವಾಗಿಲ್ಲ. ಈಗಾಗಲೇ ಮಕ್ಕಳಿಗೆ 3 ವರ್ಷ ತುಂಬಿದ್ದು, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆ ಆರಂಭಿಸಲು ಸರ್ಕಾರದ ಭಾಗ್ಯಲಕ್ಷ್ಮೀ ಯೋಜನೆಯನ್ನು ಕಾಯುವಂತಾಗಿದೆ. ಜನರಿಗೆ ಮನೆಯ ಭಾಗ್ಯಲಕ್ಷ್ಮೀಗಾಗಿ ಉಳಿತಾಯದ ಮನಸ್ಸಿದ್ದರೂ ಭಾಗ್ಯಲಕ್ಷ್ಮೀ ಯೋಜನೆಗಾಗಿ ಕಾಯುತ್ತಿರುವ ನೂರಾರು ಕುಟುಂಬಗಳಿಗೆ ಶ್ರೀ ಪರಿಹಾರ ಒದಗಿಸಬೇಕಿದೆ.