

ಸುರತ್ಕಲ್: ಗುಡ್ಡೆಕೊಪ್ಲ ಬಳಿ ಸಮುದ್ರದಲ್ಲಿ ನಿಲ್ಲಿಸಲಾಗಿರುವ ಭಗವತಿ ಪ್ರೇಮ್ ಡ್ರೆಜ್ಜರ್ ಹಡಗು ಅಲೆಗಳ ಹೊಡೆತಕ್ಕೆ ಸಿಲುಕಿ ಪೂರ್ವದಿಂದ ಪಶ್ಚಿಮದತ್ತ ವಾಲುತ್ತಿದ್ದು, ತೈಲ ಸೋರಿಕೆಯಾಗಿದೆ. ಮುಂದೆ ತೂಫಾನ್ ಸಂದರ್ಭ ಹಡಗು ಮುಳುಗಡೆಯಾಗುವ ಸಾಧ್ಯತೆಯಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
ಮುಂಬೈನ ಮರ್ಕಟೇರ್ ಕಂಪನಿಯ ತ್ರಿದೇವಿ ಪ್ರೇಮ್, ಭಗವತಿ ಪ್ರೇಮ್ ಎಂಬ ಎರಡು ಡ್ರೆಜ್ಜರ್‌ಗಳು ಎನ್‌ಎಂಪಿಟಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಬಿಲ್ ತಡೆ ಹಿಡಿದಿದ್ದರಿಂದ ಬಂದರಿನ ಹೊರವಲಯದಲ್ಲಿ ನಿಂತಿದ್ದವು. ಈ ಪೈಕಿ ತ್ರಿದೇವಿ ಪ್ರೇಮ್ ಕಳೆದ ವರ್ಷ ಸೆ.3ರಂದು ಮುಳುಗಿತ್ತು. ಕೆಲವೇ ದಿನಗಳಲ್ಲಿ ಮುಳುಗುವ ಹಂತಕ್ಕೆ ಬಂದಿದ್ದ ಭಗವತಿ ಪ್ರೇಮ್ ಡ್ರೆಜ್ಜರನ್ನು ಅ.29ರಂದು ಗುಡ್ಡೆಕೊಪ್ಲ ಕಿನಾರೆ ಬಳಿ ತಂದು ಸಮುದ್ರದಲ್ಲಿ ನಿಲ್ಲಿಸಲಾಗಿತ್ತು.
ಇದರಲ್ಲಿದ್ದ ತೈಲ ಇತ್ಯಾದಿ ತೆಗೆಯಲಾಗಿತ್ತು. ಡ್ರೆಜ್ಜರ್ ಸ್ಥಳಾಂತರಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಜೂ.24ರಂದು ಡ್ರೆಜ್ಜರ್‌ನಿಂದ ತೈಲ ಸೋರಿದ್ದು, ಇದರಿಂದ ಸ್ಥಳದಲ್ಲಿ ದುರ್ವಾಸನೆ ಹರಡಿದೆ. ಕ್ರೇನ್ ಮತ್ತಿತರ ಯಂತ್ರಗಳ ತೈಲ ಇದಾಗಿರಬಹುದು ಎಂದು ಶಂಕಿಸಲಾಗಿದೆ.
‘ಲಂಗರು ಹಾಕಿರುವ ಕಡೆಗೆ ವಾಲಿರುವ ಡ್ರೆಜ್ಜರ್ ಮುಳುಗಿದಲ್ಲಿ ಸಮುದ್ರ ಮಾಲಿನ್ಯ ಖಚಿತ. ಯಥೇಚ್ಛ ಮೀನು ಸಿಗುತ್ತಿದ್ದ ಸ್ಥಳವಾಗಿರುವುದರಿಂದ ಮೀನುಗಾರರಿಗೆ ಸಂಕಷ್ಟವಾಗಲಿದೆ’ ಎಂದು ಗುಡ್ಡೆಕೊಪ್ಲ ಮೊಗವೀರ ಸಂಘ ಅಧ್ಯಕ್ಷ ಕೇಶವ ಕುಂದರ್ ತಿಳಿಸಿದ್ದಾರೆ.
ಟೆಂಡರ್ ಸಲ್ಲಿಕೆಗೆ ಗಡುವು
ಡ್ರೆಜ್ಜರನ್ನು ಟೋಯಿಂಗ್ ನಡೆಸಿ ಬೇರೆಡೆ ಕೊಂಡೊಯ್ಯಲು ಡಿಜಿ ಶಿಪಿಂಗ್, ಎಸ್‌ಇಜಡ್ ಮೊದಲಾದ ಇಲಾಖೆ ಅನುಮತಿ ಸಿಗಲಿಲ್ಲ. ಡ್ರೆಜ್ಜರ್ ಒಡೆದು ತೆಗೆಯಲು ಎನ್‌ಎಂಪಿಟಿ ಟೆಂಡರ್ ಕರೆದಿದ್ದು, ಟೆಂಡರ್ ಸಲ್ಲಿಕೆಗೆ ಜೂ.30 ಕಡೆ ದಿನವಾಗಿದೆ. ಅಧಿಕಾರಿಗಳು ಏನು ಮಾಡುತ್ತಾರೆ ಎಂದು ಕಾದು ನೋಡುತ್ತೇವೆ. ತೆರವುಗೊಳಿಸದಿದ್ದರೆ ಪ್ರತಿಭಟನೆಗೂ ಸಿದ್ಧ ಎಂದು ಮೀನುಗಾರ ಮುಂದಾಳು ಶರತ್ ಗುಡ್ಡೆಕೊಪ್ಲ ತಿಳಿಸಿದ್ದಾರೆ.