

ಮಡಿಕೇರಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲುಗುಂದ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಮುಕ್ತ ೭+೨ ಜನರ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ದ್ವಿತೀಯ ಸ್ಥಾನವನ್ನು ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ತಂಡ ಪಡೆದುಕೊಂಡಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಅಂತಿಮ ಹಣಾಹಣಿಯಲ್ಲಿ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ಹಾಗೂ ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ತಂಡವು ನಿಗದಿತ ಸಮಯದಲ್ಲಿ ೨-೨ ಗೋಲುಗಳಿಸಿ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಕ್ಯಾಪ್ಟನ್ಸ್ ೧೧ ತಂಡದ ಗೋಲ್ ಕೀಪರ್ ಮಣಿ ಅವರು ಎರಡು ಪೆನಾಲ್ಟಿ ಹೊಡೆತವನ್ನು ತಡೆಯುವುದರ ಮೂಲಕ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ತಂಡ ೫-೩ ಗೋಲುಗಳ ಅಂತರದಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು ಸಾಧಿಸಿ ಭಗವತಿ ಕಪ್ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿತು. ರನ್ನರ್ಸ್ ಪ್ರಶಸ್ತಿಗೆ ಚಾಮುಂಡಿ ಯುನೈಟೆಡ್ ತಂಡ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕ್ಯಾಪ್ಟನ್ಸ್ ೧೧ ಪಾಲಿಬೆಟ್ಟ ತಂಡವು ೪-೧ ಗೋಲುಗಳ ಅಂತರದಿಂದ ವೈಷ್ಣವಿ ಯುವಕ ಸಂಘ ಮರಗೋಡು ತಂಡದ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ೩-೧ ಗೋಲುಗಳ ಅಂತರದಿಂದ ಅಯ್ಯಪ್ಪ ಫ್ರೆಂಡ್ಸ್ ಹಾಲುಗುಂದ ತಂಡಗದ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತು.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನಲ್ಲಿ ನೋಂದಣಿಗೊಂಡ ೧೬ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಅತ್ಯುತ್ತಮ ತಂಡದ ಪ್ರಶಸ್ತಿಯನ್ನು ಗಾಂಧಿ ಯುವಕ ಸಂಘ ಕಂಡಕರೆ ಪಡೆದುಕೊಂಡಿತು. ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಗೆ ಕ್ಯಾಪ್ಟನ್ಸ್ ೧೧ ತಂಡದ ಮುನ್ನಡೆ ಆಟಗಾರ ಜುನೈದ್ ಭಾಜನರಾದರು. ಅತ್ಯುತ್ತಮ ಆಟಗಾರ ಪ್ರಶಸ್ತಿ ಚಾಮುಂಡಿ ಯುನೈಟೆಡ್ ತಂಡದ ಪಾಂಡಿಯನ್ ಹಾಗೂ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಅಯ್ಯಪ್ಪ ಫ್ರೆಂಡ್ಸ್ ತಂಡದ ರಾಖಿ ಪಡೆದುಕೊಂಡರು.
ಲಯನ್ಸ್ ವಿದ್ಯಾಸಂಸ್ಥೆಗೆ ಗೆಲುವು: ಭಗವತಿ ಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್‌ಪಂದ್ಯದ ಮೊದಲು ಲಯನ್ಸ್ ವಿದ್ಯಾಸಂಸ್ಥೆ ಗೋಣಿಕೊಪ್ಪ ಹಾಗೂ ಮರಗೋಡು ಎಫ್.ಸಿ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ೪-೦ ಗೋಲುಗಳ ಅಂತರದಿಂದ ಲಯನ್ಸ್ ವಿದ್ಯಾಸಂಸ್ಥೆ ಗೆಲುವು ಪಡೆಯಿತು. ಕಳೆದ ನಾಲ್ಕು ದಿನಗಳ ನಡೆದ ಭಗವತಿ ಫುಟ್ಬಾಲ್ ಕಪ್‌ನಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ಇಮ್ರಾನ್ ಖಾನ್ ಹುಬ್ಬಳ್ಳಿ, ದರ್ಶನ್ ಸುಕುಮಾರ್ ಮರಗೋಡು ಹಾಗೂ ಗೇಬ್ರಿಯಲ್ ಬೆಳಗಾವಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಿಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.