ಭಗವತಿ ಎಫ್‌ಸಿ. ಎ ತಂಡ ಚಾಂಪಿಯನ್

8adarshkdga5
Published on

ಮಡಿಕೇರಿ: ಮ್ಯಾನ್ಸ್ ಕಾಂಪೌಂಡ್ ಕ್ಲಬ್(ಎಂ.ಸಿ.ಸಿ.) ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿ(೫+೨)ಯಲ್ಲಿ ಭಗವತಿ ಎಫ್‌ಸಿ. ಎ’ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.


ಫೈನಲ್ ಪಂದ್ಯದಲ್ಲಿ ಭಗವತಿ ಎಫ್‌ಸಿ ಎ ಮತ್ತು ಭಗವತಿ ಎಫ್‌ಸಿ ಬಿ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಿತ್ತು. ಇತ್ತಂಡಗಳು ೨-೨ ಸಮಬಲ ಸಾಧಿಸಿದ ಹಿನ್ನೆಲೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ಭಗವತಿ ಎಫ್‌ಸಿ ಎ ತಂಡ ಭಗವತಿ ಎಫ್‌ಸಿ ಬಿ ತಂಡವನ್ನು ೨-೧ಗೋಲುಗಳಿಂದ ಮಣಿಸಿ ಚಾಂಪಿಯನ್ ತಮಡವಾಗಿ ಹೊರಹೊಮ್ಮಿದರೆ, ಬಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.


ಮೊದಲನೇ ಸೆಮಿಫೈನ ಪಂದ್ಯದಲ್ಲಿ ಭಗವತಿ ಎಫ್.ಸಿ ಎ’ ಹಾಗೂ ಅಂಬೇಡ್ಕರ್ ಎಫ್.ಸಿ ಪಾಲಿಬೆಟ್ಟ ತಂಡಗಳ ನಡುವೆ ನಡೆಯಿತು. ಭಗವತಿ ತಂಡದ ಶರತ್(ಕಣ್ಣ)ರವರ ಹ್ಯಾಟ್ರಿಕ್ ಹಾಗೂ ಉನೈಸ್‌ರವರ ಒಂದು ಗೋಲುಗಳ ನೆರವಿನಿಂದ ಭಗವತಿ ಎಫ್.ಸಿ ತಂಡ ೪-೧ ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಎಂ.ಸಿ.ಸಿ ಬಿ ಹಾಗೂ ಭಗವತಿ ಎಫ್‌ಸಿ ಬಿ ತಂಡಗಳ ನಡುವೆ ನಡೆಯಿತು. ಭಗವತಿ ಬಿ ತಂಡ ೪-೧ ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು.


ನೌಕೌಟ್ ಫಲಿತಾಂಶ: ಎಂಸಿಸಿ ತಂಡ ಪ್ರಥಮ ದರ್ಜೆ ಕಾಲೇಜು ತಂಡದ ವಿರುದ್ಧ ೬-೦ ಗೋಲುಗಳ ಗೆಲುವು ಸಾಧಿಸಿತು. ಅಮಿಟಿ ತಂಡ ವೈಷ್ಣವಿ ವಿರುದ್ಧ ೧-೦ ಗೋಲುಗಳ ಜಯ ಸಾಧಿಸಿತು. ಸುಪ್ರೀಂ ತಂಡ ಅಮಿಟಿ(ಎ) ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ೩-೧ ಗೋಲುಗಳ ಗೆಲುವು ಸಾಧಿಸಿತು. ಭಗವತಿ ತಂಡ ರಾಕ್ ಸ್ಟಾರ್ ವಿರುದ್ಧ ೫-೦ ಗೋಲುಗಳ ಜಯ ದಾಖಲಿಸಿತು. ಭಗವತಿ ’ಬಿ’ ತಂಡ ಯುನೈಟೆಡ್ ಎಫ್‌ಸಿ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ೩-೨ ಗೋಲುಗಳ ಜಯ ಸಾಧಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಭಗವತಿ ತಂಡ ಅಮಿಟಿ ವಿರುದ್ಧ ೩-೧ ಗೋಲುಗಳ ಗೆಲುವು ಸಾಧಿಸಿತು. ಎಂಸಿಸಿ ಎ ವಿರುದ್ಧ ಅಂಬೇಡ್ಕರ್ ಎಫ್‌ಸಿ ೨-೦ ಗೋಲುಗಳ ಜಯ ಸಾಧಿಸಿತು. ಎಂಸಿಸಿ ಬಿ ತಂಡ ಚಾರ್ಮರ್ ವಿರುದ್ಧ ೫-೦ ಗೋಲುಗಳ ಗೆಲುವು ದಾಖಲಿಸಿತು.


ಪಂದ್ಯಾವಳಿಯ ತೀರ್ಪುಗಾರರಾಗಿ ರಾಜ್ಯಮಟ್ಟದ ತೀರ್ಪುಗಾರ ಇಸ್ಮಾಯಿಲ್ ಕಂಡಕೆರೆ ಹಾಗೂ ಸಂತೋಷ್ ಕಾರ್ಯನಿರ್ವಹಿಸಿದರು.

ಎಂ.ಸಿ.ಸಿ ಲೆಜೆಂಡ್ಸ್ ಪ್ರಥಮ
ಫೈನಲ್ ಪಂದ್ಯಕ್ಕೂ ಮುಂಚಿತವಾಗಿ ನಡೆದ ಪ್ರದರ್ಶನ ಪಂದ್ಯದಲ್ಲಿ ಪೋಲಿಸ್ ತಂಡ ವಿರುದ್ಧ ಪ್ರಸ್‌ಕ್ಲಬ್ ತಂಡ ೨-೦ ಗೋಲುಗಳಿಂದ ಮಣಿಸಿತು. ಪ್ರದರ್ಶನ ಪಂದ್ಯದ ಫೈನಲ್ಸ್‌ನಲ್ಲಿ ಪ್ರೆಸ್ ಕ್ಲಬ್ ಮತ್ತು ಎಂ.ಸಿ.ಸಿ ಲೆಜೆಂಡ್ಸ್ ತಂಡಗಳು ೨-೨ ಗೋಲುಗಳ ಸಮಬಲ ಸಾಧಿಸಿತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ೩-೩ ಗೋಲುಗಳ ಸಮಬಲ ಸಾಧಿಸಿತು. ಕೊನೆಗೆ ಸಡನ್ ಡೆತ್‌ನಲ್ಲಿ ಎಂ.ಸಿ.ಸಿ ತಂಡ ೧ ಗೋಲು ದಾಖಲಿಸಿ ಎಂ.ಸಿ.ಸಿ ಲೆಜೆಂಡ್ಸ್ ಪ್ರಥಮ ಸ್ಥಾನ ಪಡೆದುಕೊಂಡಿತು.


ಪ್ರಥಮ ಸ್ಥಾನ ಪಡೆದ ಭಗವತಿ ಎಫ್‌ಸಿ ಎ ತಂಡಕ್ಕೆ ೨೫,೦೦೦ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಭಗವತಿ ಎಫ್‌ಸಿ ಬಿ ತಂಡಕ್ಕೆ ೧೫,೦೦೦ ನಗದು ಮತ್ತು ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು. ಬೆಸ್ಟ್ ಪ್ಲೇಯರ್ ಭಗವತಿ ಎ ತಂಡದ ಉನೈಸ್, ಬೆಸ್ಟ್ ಟೀಮ್ ಎಂ.ಸಿ.ಸಿ ಬಿ, ಉದಯೋನ್ಮುಖ ಆಟಗಾರ ಭಗವತಿ ಬಿ ತಂಡದ ಸಿಜು, ಟಾಪ್ ಸ್ಕೋರರ್ ಭಗವತಿ ಎ ತಂಡದ ಶರತ್(ಕಣ್ಣ), ಬೆಸ್ಟ್ ಗೋಲು ಕೀಪರ್ ಎಂ.ಸಿಸಿ ಬಿ ತಂಡದ ಸಿದ್ದಾರ್ಥ್ ಪಡೆದುಕೊಂಡರು.

ಕ್ರೀಡಾಕೂಟಕ್ಕೆ ಚಾಲನೆ
ಮ್ಯಾನ್ಸ್ ಕಾಂಪೌಂಡ್ ಸಮೀಪವಿರುವ ಫುಟ್ಬಾಲ್ ಮೈದಾನದಲ್ಲಿ ಆಯೋಜಿಸಲಾಗಿರುವ ಪಂದ್ಯಾವಳಿಗೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಶ್ಮಯಿ ಚಾಲನೆ ನೀಡಿದರು.


ನಂತರ ಮಾತನಾಡಿದ ಅವರು, ೧೯೬೮ರಲ್ಲಿ ಆರಮಭಗೊಂಡು ಫುಟ್ಬಾಲ್ ಕ್ರೀಡೆಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿರುವ ಎಂ.ಸಿ.ಸಿ. ಕ್ಲಬ್‌ನ ಕಾರ್ಯ ಶ್ಲಾಘನೀಯ. ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಪಂದ್ಯಾವಳಿ ಆಯೋಜನೆ ಮಾಡಲಾಗದಿದ್ದರೂ ಮತ್ತೆ ಮುಂದುವರಿಸಿರುವುದು ಉತ್ತಮ ಕಾರ್ಯವಾಗಿದೆ. ಪಂದ್ಯಾವಳಿ ಆಯೋಜನೆಗೆ ಕ್ಲಬ್‌ನ ಪದಾಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದ್ದು, ಪಂದ್ಯಾವಳಿ ಯಶಸ್ಸಾಗಲಿ ಎಂದು ಶುಭ ಹಾರೈಸಿದರು.


ಎಂ.ಸಿ.ಸಿ. ಕ್ಲಬ್‌ನ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕ್ಲಬ್‌ನ ಅಧ್ಯಕ್ಷ ಕ್ರಿಸ್ಟೋಫರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಸಿ.ಸಿ. ಕ್ಲಬ್‌ನ ಹಿರಿಯ ಆಟಗಾರರುಗಳಾದ ಎನ್.ಕೆ.ರವೀಂದ್ರ, ಕುಟ್ಟಯ್ಯ ವಾಸು, ಸುಜಿತ್ ಚಿಣ್ಣಪ್ಪ, ಕ್ಲಬ್‌ನ ಕಾರ್ಯದರ್ಶಿ ಉಮೇಶ್‌ಕುಮಾರ್, ಖಜಾಂಚಿ ಪೀಟರ್, ಪದಾಧಿಕಾರಿ ಸಚಿನ್ ವಾಸುದೇವ್ ಇದ್ದರು.

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಭಾರತ ತಂಡದ ಮಾಜಿ ಆಟಗಾರ ಅಣ್ಣಪ್ಪ, ಎಂ.ಸಿ.ಸಿ ಅಧ್ಯಕ್ಷ ಕ್ರಿಸ್ಟೋಫರ್, ಕಾರ್ಯದರ್ಶಿ ಉಮೇಶ್, ಎಂ.ಸಿ.ಸಿ ಖಜಾಂಜಿ ಪೀಟರ್, ರವೀಂದ್ರ, ಪುಟ್ಟಯ್ಯ ವಾಸು, ಕುಡೆಕಲ್ ಸಂತೋಷ್, ಎಂ.ಸಿ.ಸಿ ಹಿರಿಯ ಆಟಗಾರರು ವೇದಿಕೆಯಲ್ಲಿ ಇದ್ದರು. ವಿಜೇತ ತಂಡಕ್ಕೆ ಗಣ್ಯರು ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net