

ಮಂಡ್ಯ: ಎಲ್ಲ ಸಮುದಾಯಗಳ ಮಹಾಪುರುಷರನ್ನು ನೆನೆಯುತ್ತಾ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡೋಣ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್‌ಗೋಪಾಲಕೃಷ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಭಗೀರಥ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಸ್ವಾಸ್ಥೃ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರ ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತಾ ಬಂದಿದೆ ಎಂದರು.
ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಬೇಕಾದರೆ ಎಲ್ಲ ಸಮುದಾಯಗಳ ಮಹಾಪುರುಷರ ಪಾತ್ರ ಬಹುಮುಖ್ಯವಾಗಿದೆ. ಭಗೀರಥ ಮಹರ್ಷಿಗಳು ಕಪಿಲ ಮಹರ್ಷಿಗಳಿಂದ ಮುಕ್ತಿ ಪಡೆಯುವುದಕ್ಕಾಗಿ ಹಾಗೂ ಇವರ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾದಾಗ ಅದನ್ನು ಪರಿಹರಿಸುವುದಕ್ಕಾಗಿ ತಪಸ್ಸು ಕೈಗೊಂಡರು. ಸತತವಾಗಿ ಹಲವಾರು ವರ್ಷಗಳ ಕಾಲ ಪ್ರಯತ್ನ ಮಾಡಿ ಸಾಧಿಸಿದರೆ ಅದನ್ನ ಭಗೀರಥ ಪ್ರಯತ್ನ ಎನ್ನುತ್ತಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಭಗೀರಥ ಮಹರ್ಷಿಗಳು ಇಕ್ಷ್ವಾಕು ರಾಜವಂಶದ ರಾಜಕುಮಾರನಾದ ನಂತರ ತನ್ನ ಪೂರ್ವಜರ ಭೀಕರ ಅಂತ್ಯವನ್ನು ತಿಳಿದರು. ಬಳಿಕ ತನ್ನ ಪೂರ್ವಜರಿಗೆ ಸದ್ಗತಿ ಪ್ರಾಪ್ತಿಯಾಗಲಿಲ್ಲವೆಂಬ ವಿಷಾದದಿಂದ ತನ್ನ ಮಂತ್ರಿಗೆ ಕರ್ತವ್ಯಗಳನ್ನು ವಹಿಸಿ ಹಿಮಾಲಯದಲ್ಲಿ ತಪಸ್ಸಿಗೆ ಹೋದರು. ಭಗೀರಥ ಮಹರ್ಷಿಗಳು ಶಿವನನ್ನು ಕುರಿತು ತೀವ್ರ ತಪಸ್ಸು ಮಾಡಿದರು. ಜತೆಗೆ ಗಂಗೆಯನ್ನು ಭೂಮಿಗೆ ಇಳಿಸುವಂತೆ ಕೇಳಿದರು. ಶಿವನು ಅವನಿಗೆ ವರವನ್ನು ನೀಡಿದನು. ಇದು ಅಂತಿಮವಾಗಿ ಗಂಗಾ ದೇವಿಯು ಗಂಗಾನದಿಯ ರೂಪದಲ್ಲಿ ಭೂಮಿಗೆ ಇಳಿಯಲು ಕಾರಣವಾಯಿತು ಎಂದು ಕಥಾ ಪ್ರಸಂಗವನ್ನು ವಿವರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್, ಡಿಡಿಪಿಐ ಎಸ್.ಟಿ.ಜವರೇಗೌಡ, ಉಪ್ಪಾರ ಸಮುದಾಯದ ಮುಖಂಡರಾದ ನಾಗರತ್ನ, ಸಿದ್ದರಾಜು, ಜಯಶಂಕರ್‌ಮೂರ್ತಿ, ಹೇಮಮೂರ್ತಿ ಇತರರಿದ್ದರು.