

ತುಮಕೂರು: ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ತತ್ವಗಳ ಆಧಾರದಲ್ಲಿ ನಡೆದರೆ ಸಣ್ಣಪುಟ್ಟ ಸಮುದಾಯಗಳು ಸಮಾಜದ ಮುಖ್ಯವಾಹಿನಿ ಸೇರಬಹುದು ಎಂದು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಹೇಳಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಉಪ್ಪಾರ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಗೌರವ, ಘನತೆಯಿಂದ ಬದುಕಲು ಅವಕಾಶ ಕಲ್ಪಿಸಲಾಗಿದೆ. ತಳಸಮುದಾಯಗಳು ಮೇಲೆ ಬರಲು ಸಂಘಟಿತರಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.
ಸರ್ಕಾರ ನೀಡುವ ಸವಲತ್ತು ಪಡೆದಿರುವ ಜನರು ತಮ್ಮ ಹಿಂದಿರುವ ಜನರಿಗೂ ಸವಲತ್ತು ಸಿಗುವಂತೆ ನೋಡಿಕೊಳ್ಳಬೇಕು. ಆ ಮೂಲಕ ಅವರನ್ನು ಕೈಹಿಡಿದು ಮೇಲೆತ್ತುವ ಕೆಲಸ ಮಾಡಬೇಕು. ಉಪ್ಪಾರ ಸಮುದಾಯದ ವತಿಯಿಂದ ವಿದ್ಯಾರ್ಥಿನಿಲಯ ನಡೆಸುತಿದ್ದು, ಅದಕ್ಕೆ ಬೇಕಾದ ಎಲ್ಲ ರೀತಿಯ ನೆರವನ್ನು ಒದಗಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಗಂಭೀರ ಹೆಜ್ಜೆ ಇಡಬೇಕು ಎಂದು ಸಲಹೆಯಿತ್ತರು.
ಜಾಗತಿಕ ಮಟ್ಟದಲ್ಲಿ ವಿುಲ ಅವಕಾಶಗಳಿದ್ದು, ಅವುಗಳನ್ನು ತಮ್ಮದಾಗಿಸಿಕೊಳ್ಳಲು ಹೇಗೆ ಕೆಲಸ ಮಾಡಬೇಕೆಂಬ ನಿಟ್ಟಿನಲ್ಲಿ ಸಮುದಾಯದಲ್ಲಿರುವ ಕ್ರಿಯಾಶೀಲರು ಮುಂದೆ ಮಾರ್ಗದರ್ಶನ ಮಾಡಬೇಕು. ಹಿರಿಯರು ಅವರ ಬೆನ್ನಿಗೆ ನಿಂತು ಸಮುದಾಯದ ಅಭಿವೃದ್ಧಿಗೆ ಕಾರ್ಯನಿರ್ವಹಿಸಬೇಕಿದೆ. ನಿನ್ನ ಉದ್ಧಾರ ನಿನ್ನಿಂದಲೇ ಎಂಬ ಹಿರಿಯರ ಮಾತನ್ನು ನಾವೆಲ್ಲರೂ ಪಾಲಿಸೋಣ ಎಂದು ಜ್ಯೋತಿಗಣೇಶ್ ತಿಳಿಸಿದರು.
ಪಾಲಿಕೆ ನಾಮಿನಿ ಸದಸ್ಯ ತ್ಯಾಗರಾಜಸ್ವಾಮಿ, ಉಪ್ಪಾರ ಸಮುದಾಯದ ಮುಖಂಡ ಶ್ರೀನಿವಾಸ್, ವೈದ್ಯರಾದ ಡಾ.ನಾಗೇಶ್, ಸಂಘದ ಉಪಾಧ್ಯಕ್ಷರಾದ ರೇಣುಕಯ್ಯ, ನಾಗೇಂದ್ರ, ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಸತೀಶ್, ಚನ್ನಿಗರಾಯಪ್ಪ, ಶಿವಣ್ಣ, ರಾಮಚಂದ್ರ, ಸಂಜೀವಪ್ಪ, ಮಂಜಣ್ಣ, ಲೋಕೇಶ್, ನಾಗರಾಜು ಉಪಸ್ಥಿತರಿದ್ದರು.