ಬತ್ತಿದ ಕೆರೆಗೆ ಕೊಳವೆ ಬಾವಿ ಮೂಲಕ ನೀರು ಹರಿಸಿದ ಭಗೀರಥ

21HNL2- LAKE WATER
Published on

ಗಿರೀಶ ದೇಶಪಾಂಡೆ ಹಾನಗಲ್ಲ
ಬಿರು ಬೇಸಿಗೆ ಮತ್ತು ಮಳೆ ಕೊರತೆ ಮಧ್ಯೆ ರೈತರೆಲ್ಲರೂ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ಜನ- ಜಾನುವಾರುಗಳ ಕುಡಿಯುವ ನೀರಿನ ದಾಹ ತಣಿಸುವ ನಿಟ್ಟಿನಲ್ಲಿ ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮದ ರೈತ ರವಿ ತಿರುಮಲೆ ಎಂಬುವವರು ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.


ತಮ್ಮ ಹೊಲದ ಸಮೀಪದ ಕೊಳ್ಳಿಕೆರೆಯ ನೀರು ಬತ್ತಿ ಎರಡ್ಮೂರು ತಿಂಗಳುಗಳೇ ಕಳೆದಿವೆ. ಹಿಂಗಾರು-ಮುಂಗಾರು ಮಳೆಗಳು ಸರಿಯಾಗಿ ಬೀಳದ್ದರಿಂದ ಈ ಕೆರೆಗೆ ನೀರು ಹರಿದುಬರಲಿಲ್ಲ. ಇದರಿಂದಾಗಿ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು.

ಇದನ್ನರಿತ ರೈತ ರವಿ, ತಮ್ಮ ಹೊಲದಲ್ಲಿರುವ ಕೊಳವೆ ಬಾವಿಯಿಂದ ಪೈಪ್‌ಲೈನ್ ಮೂಲಕ ಕೆರೆಗೆ ನೀರು ಹರಿಸುತ್ತಿದ್ದಾರೆ. ಹೆಸ್ಕಾಂ ಸದ್ಯ ಹಗಲು ಮತ್ತು ರಾತ್ರಿ ಸೇರಿ ಒಟ್ಟು ಏಳು ಗಂಟೆ ವಿದ್ಯುತ್ ನೀಡುತ್ತಿದ್ದು, ಇದೇ ಸಮಯದಲ್ಲಿ ಕೆರೆಗೆ ನೀರು ತುಂಬಿಸುವ ಕಾಯಕದಲ್ಲಿ ತೊಡಗಿದ್ದಾರೆ.


ಜೂನ್ ತಿಂಗಳು ಮುಗಿಯುತ್ತ ಬಂದರೂ ಇದುವರೆಗೂ ಮಳೆ ಆರಂಭಗೊಂಡಿಲ್ಲ. ಹೀಗಾಗಿ, ತಾಲೂಕಿನ ಬಹುತೇಕ ಕೆರೆ- ಕಟ್ಟೆಗಳೆಲ್ಲ ನೀರಿಲ್ಲದೆ ಭಣಗುಡುತ್ತಿವೆ.

ಸಾರ್ವಜನಿಕರೂ ಕುಡಿಯುವ ನೀರಿಗಾಗಿ ಕಿಲೋ ಮೀಟರ್‌ಗಳಷ್ಟು ದೂರ ತೆರಳಿ ನೀರು ತರಬೇಕಾದ ಸ್ಥಿತಿ ಎದುರಾಗಿದೆ. ಬಹಳಷ್ಟು ಕೊಳವೆ ಬಾವಿಗಳು ಒಣಗಿ ಹೋಗಿವೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಇದೆಲ್ಲದರ ಮಧ್ಯೆ ಸಾರ್ವಜನಿಕ ಕೆರೆ ತುಂಬಿಸುವ ಕೆಲಸಕ್ಕೆ ತಿರುಮಲೆ ಮುಂದಾಗಿರುವುದು ಎಲ್ಲ ರೈತರಿಗೂ ಮಾದರಿಯಾಗಿದೆ.

ಇಷ್ಟು ವರ್ಷ ಇದೇ ಕೆರೆಯ ನೀರನ್ನು ಗ್ರಾಮದವರೆಲ್ಲರೂ ಬಳಸಿಕೊಂಡಿದ್ದೇವೆ. ಈಗ ಕೆರೆಯಲ್ಲಿ ನೀರಿಲ್ಲದ್ದರಿಂದ ಜಾನುವಾರುಗಳಿಗೂ ಸಮಸ್ಯೆ ಎದುರಾಗಿತ್ತು. ಹೀಗಾಗಿ, ಕೆರೆಗೆ ನೀರು ತುಂಬಿಸುವ ಯೋಚನೆ ಮೂಡಿತು. ಕೆರೆ ತುಂಬಿಸಲಾಗದಿದ್ದರೂ ಒಂದಷ್ಟು ನೀರು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದ ಜಾನುವಾರುಗಳ ನೀರಿನ ಸಮಸ್ಯೆ ನೀಗುತ್ತದೆ ಎಂಬ ವಿಶ್ವಾಸವಿದೆ. - ರವಿ ತಿರುಮಲೆ, ಅರಳೇಶ್ವರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net