

ಯಳಂದೂರು: ಈಗಾಗಲೇ ರಾಜ್ಯಾದ್ಯಂತ ಭಗೀರಥ ಚಲನಚಿತ್ರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿ 50ನೇ ದಿನದತ್ತ ಮುನ್ನುಗುತ್ತಿದೆ. ಆದರೆ ಕೆಲ ಕಾರಣಗಳಿಂದ ಮೈಸೂರಿನ ಕೆಲವು ಭಾಗ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಚಲನಚಿತ್ರ ಬಿಡುಗಡೆ ವಿಳಂಬವಾಗಿತ್ತು. ಮಾ.21ರಂದು ಈ ಜಿಲ್ಲೆಗಳಲ್ಲೂ ಬಿಡುಗಡೆಯಾಗಲಿದೆ. ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರೂ ಆದ ನಾಯಕ ನಟ ಎಸ್.ಜಯಪ್ರಕಾಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ಸತತ ಪ್ರಯತ್ನ ಪಡುವ ವ್ಯಕ್ತಿಗೆ ಸೋಲಿಲ್ಲ ಎಂಬ ಅಂಶ ಚಿತ್ರದಲ್ಲಿ ಅಡಕವಾಗಿದೆ. ರವಿಕಾಳೆ, ಸುಧಾ ಬೆಳವಾಡಿ, ಶಿವರಾಜು, ನಿಸರ್ಗ, ರೂಪಶ್ರೀ ಸೇರಿದಂತೆ ಅನೇಕರ ತಾರಾಗಣವಿದೆ. ವಿಜಯ್‌ಪ್ರಕಾಶ್, ಹೇಮಂತ್ ಸೇರಿದಂತೆ ಹಲವು ಗಾಯಕರ ಹಾಡುಗಳು ಇವೆ. ಸದಭಿರುಚಿಯ ಇಡೀ ಕುಟುಂಬವೇ ಕುಳಿತು ನೋಡುವ ಸಿನಿಮಾವಾಗಿದ್ದು. ಅಚ್ಚ ಕನ್ನಡದ ಪ್ರತಿಭೆಗಳು ನಟಿಸಿದ್ದಾರೆ ಎಂದು ತಿಳಸಿದರು.
ಕಾವೇರಿ ಕ್ರಿಯಾ ಸಮಿತಿ ತೇಜಸ್ ಲೋಕೇಶ್‌ಗೌಡ ಮಾತನಾಡಿದರು. ಪ್ರೀತಿಸಿಂಗ್, ಕೃಷ್ಣಪ್ಪ, ಶಶಿಕಲಾ, ಕುಮಾರ್, ಹನುಮಂತಯ್ಯ, ಹೊಂಗನೂರು ಮಹದೇವಸ್ವಾಮಿ ಇತರರು ಇದ್ದರು.