

ಯಳಂದೂರು: ಭಗೀರಥರು ಸಕಲರ ಉದ್ಧಾರಕ್ಕೆ ಗಂಗೆಯನ್ನು ಭೂಮಿಗೆ ತರಲು ಎಷ್ಟು ಪ್ರಯತ್ನಪಟ್ಟರೋ ಅದೇ ಪ್ರಯತ್ನವನ್ನು ಉಪ್ಪಾರ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಯತ್ನಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಪೈಪೋಟಿಯುಕ್ತ ಜೀವನವಾಗಿದೆ. ನಾವು ಎಲ್ಲಿ ಹೋದರೂ ಸವಾಲಗಳನ್ನು ಸ್ವೀಕರಿಸಲು ಸಿದ್ಧರಾಗಬೇಕಿದೆ. ಶಿಕ್ಷಣದಿಂದ ಎಲ್ಲವನ್ನೂ ಗೆಲ್ಲುವ ಛಲ ನಮಗೆ ಬರುತ್ತದೆ. ಉಪ್ಪಾರ ಸಮುದಾಯ ಶ್ರಮದಾಯಕ ಸಮುದಾಯವಾಗಿದೆ. ಇವರು ಪ್ರಯತ್ನಪಟ್ಟರೆ ಏನು ಬೇಕಾದರೂ ಸಾಧಿಸುತ್ತಾರೆ. ಇದಕ್ಕೆ ದೊಡ್ಡ ನಿದರ್ಶನ ಭಗೀರಥ ಮಹರ್ಷಿಯಾಗಿದ್ದಾರೆ ಎಂದರು.
ಸಮುದಾಯದ ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ರಾಜಕೀಯವಾಗಿ ನಮ್ಮ ಜಿಲ್ಲೆಯಲ್ಲಿ ಈ ಸಮುದಾಯ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆರ್ಥಿಕವಾಗಿ ಇವರು ಸಬಲರಾಗಬೇಕು. ಮೌಢ್ಯಗಳಿಂದ ದೂರವಿರಬೇಕು. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 33 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ. ನನ್ನ ಗೆಲುವಿನಲ್ಲಿ ಈ ಸಮುದಾಯದ ಪಾತ್ರ ಹೆಚ್ಚಾಗಿದೆ. ನಾನು ಇದಕ್ಕೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.
ಮುಖ್ಯ ಭಾಷಣಕಾರ ಸಂತೆಮರಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಿಯಾಶಂಕರ್ ಮಾತನಾಡಿ, ಭಗೀರಥರ ವೃತ್ತಾಂತ ಹಾಗೂ ಪೌರಾಣಿಕ ಹಿನ್ನೆಲೆ ಹಾಗೂ ತಮ್ಮ ಸಮುದಾಯದ ಬಗ್ಗೆ ಬೆಳಕು ಚೆಲ್ಲಿದರು.
ಪಪಂ ಅಧ್ಯಕ್ಷೆ ಲಕ್ಷ್ಮೀ ಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಸುಶೀಲಾ ಪ್ರಕಾಶ್, ಮಹೇಶ್, ವೈ.ಜಿ.ರಂಗನಾಥ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಚ್.ವಿ ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕಿನಕಹಳ್ಳಿ ಸಿದ್ದರಾಜು, ವೈ.ಎಸ್.ನಂಜಶೆಟ್ಟಿ, ಕಂದಹಳ್ಳಿ ನಂಜುಂಡಸ್ವಾಮಿ, ವೈ.ಕೆ.ಮೋಳೆನಾಗರಾಜು, ಕೆಸ್ತೂರು ನಾಗರಾಜು, ಸುರೇಶ್, ತಹಸೀಲ್ದಾರ್ ಬಸವರಾಜು, ಸಿಪಿಐ ಕೆ.ಶ್ರೀಕಾಂತ್, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಸಿದ್ದಪ್ಪಸ್ವಾಮಿ, ರೇಚಣ್ಣ ಇದ್ದರು.