

ಮಂಡ್ಯ: ಭಗೀರಥ ಮಹರ್ಷಿ ಸಮಾಜದಲ್ಲಿ ಮಹಾನ್ ಚಿಂತಕರಾಗಿದ್ದವರು. ಅವರ ಆದರ್ಶ ಹಾಗೂ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಗಂಗೆಯನ್ನು ತನ್ನ ತಪಸ್ಸಿನ ಫಲವಾಗಿ ಭೂಲೋಕಕ್ಕೆ ಕರೆ ತಂದಂತಹ ಮಹಾನ್ ಪುರುಷ ಭಗೀರಥ ಮಹರ್ಷಿ ಎಂಬ ಐತಿಹಾಸಿಕ ಹಿನ್ನೆಲೆಯಿದೆ. ಅಂದಿನ ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ಅವರು ನೀಡಿದ್ದಾರೆ. ಭಗೀರಥರ ನಿಷ್ಠೆ, ದೃಢ ವಿಶ್ವಾಸ, ಛಲ ಹಾಗೂ ಸತತ ಪ್ರಯತ್ನದ ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರ ಜೀವನದಲ್ಲಿ ಪ್ರಯತ್ನ ಎಂಬುದು ನಿರಂತರವಾಗಿರಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಭಗೀರಥ ಮಹರ್ಷಿ ಒಳ್ಳೆಯ ತಪಸ್ಸು ಹಾಗೂ ತಮ್ಮ ಸತತ ಪ್ರಯತ್ನಗಳ ಮೂಲಕ ಗಂಗೆಯನ್ನು ಭೂಲೋಕಕ್ಕೆ ತಂದು, ಇಡೀ ಭರತ ಖಂಡವನ್ನು ಪವಿತ್ರ ಭೂಮಿಯನ್ನಾಗಿ ಮಾಡಿದ್ದಾರೆ. ಈ ಮೂಲಕ ಅಂದಿನ ಕೃಷಿಕ ಸಮಾಜದ ಉದ್ಧಾರಕ್ಕೆ ಕಾರಣಕರ್ತರಾಗಿದ್ದಾರೆ ಎಂದು ಪ್ರಸಿದ್ಧ ಪುರಾಣಗಳಿಂದ ತಿಳಿಯಬಹುದು. ಪ್ರಸ್ತುತ ಗಂಗಾ ನದಿಯು ಜಗತ್ತಿನ ಶ್ರೇಷ್ಟ ನದಿಯಾಗಿದೆ. ಪ್ರತಿಯೊಬ್ಬರೂ ಭಗೀರಥ ಮಹರ್ಷಿಯ ಜಯಂತಿ ದಿನವಾದ ಇಂದು ಅವರ ಸ್ಮರಣೆಯನ್ನು ಮಾಡಿ ಭಕ್ತಿಯಿಂದ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.