ಹುಟ್ಟೂರು ಸಂತೇಶಿವರದ ಭಗೀರಥ ‘ಭೈರಪ್ಪ’

ಹುಟ್ಟೂರು ಸಂತೇಶಿವರದ ಭಗೀರಥ ‘ಭೈರಪ್ಪ’
Published on

ಕೆ.ಆರ್.ಪ್ರಸಿನ್ ಹಾಸನ

ಎಸ್.ಎಲ್.ಭೈರಪ್ಪ ಅವರ ಹುಟ್ಟೂರು ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದ 150 ಎಕರೆ ವ್ಯಾಪ್ತಿಯಲ್ಲಿ ಹರಡಿರುವ ವಿಶಾಲವಾದ ಕೆರೆ ತುಂಬಿ ಬರೋಬ್ಬರಿ 40 ವರ್ಷಗಳೇ ಕಳೆದಿದ್ದವು. ಬದಲಾಗುತ್ತಿದ್ದ ಸರ್ಕಾರಗಳ ನಡುವೆಯೂ ಹಲವು ವರ್ಷಗಳ ಕಾಲ ಮುತುವರ್ಜಿ ವಹಿಸಿ ಸಂತೇಶಿವರ ಕೆರೆಗೆ ನೀರು ತುಂಬಿಸುವ ಮೂಲಕ ಜನ್ಮ ನೆಲದ ಋಣವನ್ನು ತೀರಿಸಿದವರು ಎಸ್.ಎಲ್.ಭೈರಪ್ಪ.

ಕೆರೆ ತುಂಬಿಸುವ ಸಲುವಾಗಿ ಭೈರಪ್ಪ ಅವರು ಸರ್ಕಾರದೊಂದಿಗೆ ದೀರ್ಘಕಾಲದವರೆಗೆ ಹೋರಾಡಿದ ಪಯಣ ಸುಲಭದ ದಾರಿಯಾಗಿರಲಿಲ್ಲ. ಸಂತೇಶಿವರ ಸೇರಿದಂತೆ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ಜಲದಾಹ ಇಂದು ನೀಗಿದೆ. ಈ ಮೂಲಕ ಸಾಹಿತ್ಯ ಕ್ಷೇತ್ರದ ನಕ್ಷತ್ರವಾಗಿ ಮಿನುಗುವುದರ ಜತೆಗೆ ಹುಟ್ಟೂರಿಗೂ ಭಗೀರಥನಾಗಿದ್ದಾರೆ ಭೈರಪ್ಪ.

2019ರ ಸಮಯದಲ್ಲಿ ಹುಟ್ಟೂರಿನ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಎಸ್.ಎಲ್.ಭೈರಪ್ಪ ಅವರಲ್ಲಿ ಗ್ರಾಮಸ್ಥರೆಲ್ಲ ಸೇರಿ ಊರಿನ ಕೆರೆ ತುಂಬಿಸುವಂತೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದ್ದರು. ತಾವಾಯಿತು, ಸಾಹಿತ್ಯ ಕ್ಷೇತ್ರದಲ್ಲಿದ್ದ ಭೈರಪ್ಪ ಅವರು ಆ ವೇಳೆ ನಾನು ಒಬ್ಬ ಸಾಹಿತಿ. ನನ್ನ ಮಾತನ್ನು ರಾಜಕಾರಣಿಗಳು ಕೇಳುತ್ತಾರೆ ಎಂಬ ನಂಬಿಕೆ ಇಲ್ಲ ಎಂದು ಹೇಳಿದ್ದರು. ನಂತರ 2019ರ ಸಮಯದಲ್ಲಿ ದಸರಾ ಉದ್ಘಾಟನೆಗೆ ಭೈರಪ್ಪ ಅವರನ್ನು ಆಹ್ವಾನಿಸಲು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮೈಸೂರಿನ ಭೈರಪ್ಪ ಅವರ ನಿವಾಸಕ್ಕೆ ಆಗಮಿಸಿದ ಸಮಯದಲ್ಲಿ ಭೈರಪ್ಪ ಅವರು, ನಾನು ಹುಟ್ಟಿ ಬೆಳೆದು, ನನ್ನ ಸಾಹಿತ್ಯ ರಚನೆಗೆ ಪೂರಕವಾದ ವಾತಾವರಣ ಸೃಷ್ಟಿಸಿದ ನನ್ನೂರಿನ ಕೆರೆ ತುಂಬಿಸುವ ಏತನೀರಾವತಿ ಯೋಜನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.

ಭೈರಪ್ಪ ಅವರ ಮನವಿಯನ್ನು ಅಂದೇ ಗಂಭೀರವಾಗಿ ಪರಿಗಣಿಸಿದ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ 25 ಕೋಟಿ ರೂ. ಅನುದಾನ ಘೋಷಿಸಿದರು. ಆ ಬಳಿಕ ಯೋಜನೆ ಕಾರ್ಯಗತಕ್ಕೆ ಭೈರಪ್ಪ ಅವರು ಭಗೀರಥ ಪ್ರಯತ್ನವನ್ನೇ ಮಾಡಬೇಕಾಯಿತು. ಹಲವು ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ಅಂದುಕೊಂಡಂತೆ ಸಾಗದೆ ನನೆಗುದಿಗೆ ಬಿದ್ದಿತ್ತು. ಇದಕ್ಕಾಗಿ ಭೈರಪ್ಪ ಅವರು ಸರ್ಕಾರಕ್ಕೆ ಹತ್ತು ಹಲವು ಪತ್ರಗಳನ್ನು ಬರೆಯಬೇಕಾಯಿತು. ಆದರೂ ಆಶಾದಾಯಕ ಬೆಳವಣಿಗೆ ಕಾಣಲಿಲ್ಲ. ಆಗ ಸಿಎಂ ಸ್ಥಾನಕ್ಕೆ ಬಂದ ಬಸವರಾಜ ಬೊಮ್ಮಾಯಿ ಅವರು, ತಮ್ಮ ಆಡಳಿತದ ಕೊನೆಯ ಅವಧಿಯಲ್ಲಿ ಸಂತೇಶಿವರ ಏತನೀರಾವರಿ ಯೋಜನೆಗೆ 25 ಕೋಟಿ ರೂ. ಅನುದಾನವನ್ನು ಮೀಸಲಿರಿಸಿದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಹಣವನ್ನು ಮಂಜೂರು ಮಾಡಿದ ಪರಿಣಾಮ 2025ರ ಮಾರ್ಚ್‌ನಲ್ಲಿ ಎಲ್ಲ ಅಡೆತಡೆಗಳನ್ನು ದಾಟಿ ಗ್ರಾಮದ ಕೆರೆ ತುಂಬಿತು.

9 ಕಿ.ಮೀ. ಪೈಪ್‌ಲೈನ್

ಜಾಲಘಟ್ಟದಿಂದ ಜಾಕ್‌ವೆಲ್ ನಿರ್ಮಿಸಿ ಅಲ್ಲಿಂದ 9 ಕಿ.ಮೀ. ಪೈಪ್‌ಲೈನ್ ಮೂಲಕ ಮತ್ತು ಎರಡು ಕಿ.ಮೀ. ಭೂಮಿಯ ಗುರುತ್ವಾಕರ್ಷಣೆಯ ಮೂಲಕ ಸಂತೇಶಿವರ ಗ್ರಾಮಕ್ಕೆ ನೀರು ತರುವ ಕೆಲಸ ಮಾಡಲಾಗಿದೆ. ಈ ವೇಳೆ ಇಲ್ಲೂ ಕೆಲವೊಂದು ಆಡಚಣೆ ಎದುರಾಗಿದ್ದವು. ಒಬ್ಬ ರೈತ ತನ್ನ ಜಮೀನಿನ ಕೆಳಗೆ ಪೈಪ್‌ಲೈನ್ ಹಾದುಹೋಗಲು ಯಾರೂ ಎಷ್ಟೇ ಮನವಿ ಮಾಡಿದರೂ ಒಪ್ಪಿಗೆ ನೀಡಲಿಲ್ಲ. ಆ ವೇಳೆ ಸ್ವತಃ ಭೈರಪ್ಪ ಅವರೇ ಆತನ ಮನೆಗೆ ಭೇಟಿ ನೀಡಿ ಆತನ ಮನವೊಲಿಸಿದ ಘಟನೆ ಕೂಡ ನಡೆದಿದೆ. ಈ ಎಲ್ಲ ಅವಿತರ ಶ್ರಮಗಳಿಂದ ಇಂದು ಸಂತೇಶಿವರ ಗ್ರಾಮದ ಕೆರೆ ತುಂಬಿ ತುಳುಕುತ್ತಿದೆ.

ಗ್ರಾಮಗಳಲ್ಲಿ ಅದ್ದೂರಿ ಸನ್ಮಾನ

ಇದೇ ವರ್ಷದ ಮಾರ್ಚ್‌ನಲ್ಲಿ ಗ್ರಾಮದ ಕೆರೆ ತುಂಬಿಸಿದ ಭೈರಪ್ಪ ಅವರಿಗೆ ಸಂತೇಶಿವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅವರನ್ನು ಊರಿಗೆ ಕರೆಯಿಸಿ ವಾರಪೂರ್ತಿ ಅದ್ದೂರಿಯಾಗಿ ಸನ್ಮಾನಿಸಿ ತಮ್ಮ ಗೌರವ ಸಮರ್ಪಿಸಿದ್ದರು. 94ರ ಇಳಿವಯಸ್ಸಿನಲ್ಲೂ ಗ್ರಾಮಸ್ಥರ ತೋರಿಸಿದ ಪ್ರೀತಿ-ಔದಾರ್ಯಗಳಿಗೆ ಭೈರಪ್ಪ ಅವರು ಸಾಕ್ಷಿಯಾಗಿದ್ದರು.

20 ಗ್ರಾಮಗಳಿಗೆ ನೀರಾವರಿ: ಸಂತೇಶಿವರ ಗ್ರಾಮದ ಶಾಶ್ವತ ಏತನೀರಾವರಿ ಯೋಜನೆಯಿಂದ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿದಂತೆ ಆಗಿದೆ.

ಕೃತಜ್ಞತೆ ಸಲ್ಲಿಸುತ್ತೇನೆ

ನನ್ನ ಹುಟ್ಟೂರಿನ ಜನರಿಗೆ ಶಾಶ್ವತ ನೀರಾವರಿ ಯೋಜನೆ ತರಬೇಕು ಎನ್ನುವ ಉದ್ದೇಶದೊಂದಿಗೆ ಸರ್ಕಾರ ಹಾಗೂ ಸಂಬಂಧಿಸಿದವರಿಗೆ ಹತ್ತಾರು ಬಾರಿ ಪತ್ರ ವ್ಯವಹಾರ ನಡೆಸಲಾಯಿತು. ಈ ವರ್ಷದ ಹಂಗಾಮಿನಿಂದಲೇ ಗ್ರಾಮದ ಕೆರೆಗೆ ನೀರು ಬರುತ್ತಿದೆ. ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಿದ ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಕೆರೆ ಉದ್ಘಾಟನೆ ಸಂದರ್ಭ ಎಸ್.ಎಲ್.ಭೈರಪ್ಪ ಹೇಳಿದ್ದರು.

ಗ್ರಂಥಾಲಯ, ಸಭಾಂಗಣ ನಿರ್ಮಾಣ

ಡಾ.ಎಸ್.ಎಲ್.ಭೈರಪ್ಪ ಪ್ರತಿಷ್ಠಾನದ ಮೂಲಕ ತಾವು ದುಡಿದ ಹಣವನ್ನು ಸಮಾಜಕ್ಕಾಗಿ, ತನ್ನ ಊರಿನ ಅಭಿವೃದ್ಧಿಗೆ ಖರ್ಚು ಮಾಡಲು ಚಿಂತನೆ ಮಾಡಿದ್ದರು. ಇದಕ್ಕೆ ಪೂರಕವಾಗಿ ಗೌರಮ್ಮ ಟ್ರಸ್ಟ್ ಸ್ಥಾಪಿಸಿ ಗ್ರಂಥಾಲಯ ಮತ್ತು ಸಭಾಂಗಣವನ್ನು ಸಂತೇಶಿವರದಲ್ಲಿ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net