ಗೀತೆಯ ಪ್ರಚಾರ ಅತ್ಯಂತ ಶ್ರೇಷ್ಠ ಸತ್ಕಾರ್ಯ...

Yaaga-1
Published on

ಪುತ್ತಿಗೆ ಸುಗುಣೇಂದ್ರ ಶ್ರೀ ಆಶೀರ್ವಚನ

ಭಗವದ್ಗೀತಾ ಉಪನ್ಯಾಸ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇವರ ಕೃಪೆಗೆ ಪಾತ್ರರಾಗಲು ಅನೇಕ ಬಗೆಯ ಪೂಜೆ, ಯಾತ್ರೆ, ವಿವಿಧ ವೃತ ಏನನ್ನಾದರೂ ಮಾಡಬಹುದು. ಆದರೆ, ಭಗವಂತನಿಗೆ ಅತ್ಯಂತ ಇಷ್ಟವಾಗುವ ಹಾಗೂ ಪ್ರಿಯಕರವಾಗುವ ಸಂಗತಿಯೆಂದರೆ ಅದು ಭಗವದ್ಗೀತೆಯ ಪ್ರಚಾರದ ಸತ್ಕಾರ್ಯ. ಇದರಿಂದ ಶ್ರೀಕೃಷ್ಣ ಅತ್ಯಂತ ಸಂತಸಗೊಳ್ಳುತ್ತಾನೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್​ ಗೀತೋತ್ಸವದಲ್ಲಿ ಶನಿವಾರ ಆಯೋಜಿಸಿದ್ದ ಭಗವದ್ಗೀತಾ ಮಹಾಯಾಗ ಮತ್ತು ಅನಿವಾಸಿ ಭಾರತೀಯ (ಅಮೆರಿಕ)ರಿಂದ ಭಗವದ್ಗೀತೆಯ ಉಪನ್ಯಾಸ ಹಾಗೂ ದಂಪತಿ ಡಾಟ್​ ಕಾಮ್​ ವೆಬ್​ ಸೈಟ್​ ಉದ್ಘಾಟಿಸಿ ಮಾತನಾಡಿದರು.

Yaaga-2
ದಂಪತಿ ಡಾಟ್​ ಕಾಮ್​ ವೆಬ್​ಸೈಟ್​ಅನ್ನು ಪುತ್ತಿಗೆ ಶ್ರೀಗಳು ಬಿಡುಗಡೆ ಮಾಡಿದರು.

ಪುಣ್ಯ ಗಳಿಕೆಯ ಕಾರ್ಯ

ತಂದೆ-ತಾಯಿ ಯಾವಾಗಲೂ ತಮ್ಮ ಮಕ್ಕಳಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಅವರು ತಾವು ನೀಡಿದ ಸಂಸ್ಕಾರ, ಕಲಿಸಿಕೊಟ್ಟ ಒಳ್ಳೆಯ ನಡತೆ, ಆಚರಣೆ, ಮಾತು ಪರಿಪಾಲಿಸಿದರೆ ಸಾಕು ಎಂದಷ್ಟೇ ಬಯಸುತ್ತಾರೆ. ಅದೇ ರೀತಿ ನಮ್ಮನ್ನೆಲ್ಲ ಸೃಷ್ಟಿಸಿದ ಭಗವಂತ ಈ ಜಗತ್ತಿನ ತಂದೆ-ತಾಯಿ. ಆತನಿಗೆ ಸಂತಸ ಆಗುವುದು ಏನೆಂದರೆ, ತನ್ನ ಮಾರ್ಗದರ್ಶನದಂತೆ ಮಕ್ಕಳು ನಡೆದುಕೊಳ್ಳಲಿ ಎನ್ನುವುದೇ ಆಗಿದೆ. ನಮ್ಮೆಲ್ಲರ ಉದ್ಧಾರಕ್ಕೋಸ್ಕರ ಶ್ರೀಕೃಷ್ಣ ಭಗವದ್ಗೀತೆ ನೀಡಿದ್ದಾನೆ. ಅದರ ಆದೇಶ-ಸಂದೇಶ ಅನುಸರಿಸಿದರೆ ಆತನಿಗೆ ಹೆಚ್ಚಿನ ಸಂತಸವಾಗುತ್ತದೆ. ಗೀತೆಯ ಪ್ರಸಾರ-ಪ್ರಚಾರದಿಂದ ಸಿಗುವಷ್ಟು ಪುಣ್ಯ ಬೇರಾವುದೇ ಸತ್ಕಾರ್ಯದಿಂದಲೂ ಸಿಗುವುದಿಲ್ಲ ಎಂದರು.

ಸಾಧಕರಿಗೆ ಸನ್ಮಾನ

ಅಮೆರಿಕದ ಈಶಾನ್​ ಹಾಗೂ ಪ್ರಲ್ಹಾದ್​ ಎಂಬವರು ಭಗವದ್ಗೀತೆಯ ಕುರಿತು ಇಂಗ್ಲಿಷ್​ನಲ್ಲಿ ಉಪನ್ಯಾಸ ನೀಡಿದರು. ಅಮೆರಿಕ ನ್ಯೂಜೆರ್ಸಿಯ ಶ್ರೀಕಾಂತ ಜೋಶಿ, ವಿದ್ಯಾ ಜೋಶಿ, ಮಹೇಶ್​ ಹರವು, ರೇಣುಕಾ ಹರವು, ಆಶಾ ಜನಾರ್ದನ್​ ದಂಪತಿ, ಬೆಂಗಳೂರಿನ ಅಗರವಾಲ್​ ಸಮಾಜದ ಅಧ್ಯಕ್ಷ ಸಂಜಯ್​ ಗಾರ್ಗ್​, ಕುಶಾಲನಗರದ ಸಂಕರ್ಷಣ ಪ್ರಖಂಡದ ಸ್ವಯಂಸೇವಕಿ ಪಾರ್ವತಿ ಎ.ಎ., ತಿರುಪತಿಯ ವೆಂಕಟೇಶ್​ ಪ್ರಸಾದ್​ ಅವರಿಗೆ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಶ್ರೀಗಳು ಸನ್ಮಾನಿಸಿದರು. ಇದೇವೇಳೆ ಎರಡು ಪುಸ್ತಕ ಬಿಡುಗಡೆ ಮಾಡಲಾಯಿತು.

ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾನ ನಾಗರಾಜ್​ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಇತರರಿದ್ದರು.

ಅಮೆರಿಕದ ಮಹೇಶ್​ ಹರವು ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯೂಜೆರ್ಸಿ ಮಠದ ಪ್ರಧಾನ ಅರ್ಚಕ ಯೋಗೇಂದ್ರ ಭಟ್​ ಕಾರ್ಯಕ್ರಮ ನಿರೂಪಿಸಿದರು.

ಭಗವದ್ಗೀತಾ ಮಹಾಯಾಗ ಸಂಪನ್ನ

Yaaga-3
ಉಡುಪಿ ಪುತ್ತಿಗೆ ಮಠದ ವತಿಯಿಂದ ರಾಜಾಂಗಣದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಮಹಾಯಾಗ ಸಂಪನ್ನಗೊಂಡಿತು. ಸುಗುಣೇಂದ್ರ ಶ್ರೀ, ಸುಶ್ರೀಂದ್ರ ಶ್ರೀ, ಪ್ರಸನ್ನ ಆಚಾರ್ಯ, ಯೋಗೇಂದ್ರ ಭಟ್​ ಇತರರಿದ್ದರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಬೃಹತ್​ ಗೀತೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ 'ಭಗವದ್ಗೀತಾ ಮಹಾಯಾಗ' ಶನಿವಾರ ಸಂಪನ್ನಗೊಂಡಿತು. ದೇಶ-ವಿದೇಶಗಳಿಂದ ಆಗಮಿಸಿದ್ದ ಶ್ರೀಮಠದ ಭಕ್ತರು ಸಮಗ್ರ ಭಗವದ್ಗೀತಾ ಪಾರಾಯಣ ಪಠಿಸಿದರು. ಶ್ರೀಮಠದ ಯೋಗೇಂದ್ರ ಭಟ್​ ಹೋಮ ನೆರವೇರಿಸಿದರು. ಅನುಗ್ರಹ ಸಂದೇಶ ನೀಡಿದ ಸುಗುಣೇಂದ್ರ ಶ್ರೀ, ಎಲ್ಲ ಕಾರ್ಯಗಳನ್ನೂ ಯಜ್ಞವಾಗಿ ಪರಿವರ್ತಿಸಿಕೊಂಡು ತನ್ಮೂಲಕ ಭಗವದನುಗ್ರಹ ಸಂಪಾದಿಸಿಕೊಳ್ಳುವ ಉಪಾಯವನ್ನು ಶ್ರೀಕೃಷ್ನನೇ ಭಗವದ್ಗೀತೆ ಮೂಲಕ ಲೋಕಕ್ಕೆ ತಿಳಿಸಿದ್ದಾನೆ. ಅಂತಹ ಪವಿತ್ರ ಗ್ರಂಥದಲ್ಲಿರುವ ಶ್ಲೋಕಗಳ ಮೂಲಕವೇ ಯಜ್ಞ ಆಚರಿಸುವುದು ಬಹಳ ಔಚಿತ್ಯಪೂರ್ಣ. ಭಾಗವಹಿಸಿದ ಎಲ್ಲರಿಗೂ ಶ್ರೀಕೃಷ್ಣನ ಪರಮಾನುಗ್ರಹ ಲಭಿಸಲಿ ಎಂದರು. ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಶ್ರೀಕೃಷ್ಣನಿಗೆ ಪ್ರಿಯವಾದ ಗೀತಾ ಪ್ರಚಾರಕರನ್ನು ಗುರುತಿಸುವುದೂ ಸಹ ಗೀತಾ ಜಯಂತಿ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಭಗವದ್ಗೀತೆಯ ಪ್ರಸಾರಕ್ಕಾಗಿ ಹೂಡಿಕೆ ಹಾಗೂ ಸಮಯ ವಿನಿಯೋಗಿಸಿದರೆ ಹೆಚ್ಚು ಪುಣ್ಯದೊಂದಿಗೆ ಕೈಗೊಳ್ಳುವ ಎಲ್ಲ ಬಗೆಯ ಕಾರ್ಯಗಳಲ್ಲೂ ಆರ್ಥಿಕ ಲಾಭಾಂಶವೂ ಹೆಚ್ಚುತ್ತದೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net