

ಮೈಸೂರು: ಕಾಶ್ಮೀರದ ಶೈವ ಗ್ರಂಥದಲ್ಲಿ ಹಿಂದು ಎಂಬ ಪದಕ್ಕೆ ‘ಹೀನ’ ಎಂಬ ಅರ್ಥವಿದೆ. ಅದೇ ರೀತಿ ಉರ್ದು ಗ್ರಂಥಗಲ್ಲಿ ಹಿಂದು ಪದಕ್ಕೆ ಕಳ್ಳ, ತಲೆ ಹೊಡಿಯುವವನು ಎಂಬ ಅರ್ಥವಿದೆ ಎಂದು ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಹೇಳಿದರು.
ನಗರದ ಚಾಮುಂಡಿಬೆಟ್ಟದ ತಪ್ಪಲಿನ ಚಿತಾಗಾರದ ಆವರಣದಲ್ಲಿ ಗುರುವಾರ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ 1,030ನೇ ಇಸವಿಯಲ್ಲಿ ಹಿಂದು ಪದ ಬಳಕೆ ಬಂತು. ಅದಕ್ಕೂ ಮುನ್ನ ಎಲ್ಲೂ ಸಹ ಹಿಂದು ಪದ ಉಲ್ಲೇಖವಾದ ಉದಾಹರಣೆ ಇಲ್ಲ ನಾಲ್ಕು ವೇದಗಳು, ರಾಮಾಯಣ, ಮಹಾಭಾರತ ಹಾಗೂ ಸಂಸ್ಕೃತದ ಯಾವುದೇ ಕೃತಿಗಳಲ್ಲಿ ಹಿಂದು ಪದದ ಉಲ್ಲೇಖವಿಲ್ಲ. 1,030ರಲ್ಲಿ ಪರ್ಷಿಯನ್ ಲೇಖಕ ಆಲ್ಬೆರುನಿ ಭಾರತದ ಕುರಿತು ಬರೆಯುವಾಗ ಸಿಂಧು ನದಿಯ ಹಿಂದು ಕರೆದ. ಪರ್ಷಿಯನ್ ಭಾಷೆಯಲ್ಲಿ ಸಕಾರ ಇಲ್ಲದ ಹಿನ್ನೆಲೆಯಲ್ಲಿ ಹಕಾರ ಬಳಕೆ ಮಾಡಿದ. ಹಾಗಾಗಿ ಸಿಂಧು ಬದಲು ಹಿಂದು ಎಂಬ ಪದ ಬಂತು ಎಂದು ಹೇಳಿದರು.
ಬ್ರಿಟೀಷರು ಬಂದ ನಂತರ ಹಿಂದು ಪದ ಹೆಚ್ಚಾಗಿ ಬಳಕೆ ಬಂತು. ಮುಸ್ಲಿಮೇತರರನ್ನು ಬ್ರಿಟಿಷರು ಹಿಂದುಗಳು ಎಂದು ಕರೆದರು. ಅಲ್ಲಿಯವರೆಗೆ ಹಿಂದು ಪದ ಹಲವರಿಗೆ ಗೊತ್ತಿರಲಿಲ್ಲ. ಈ ಹಿಂದೆ ಎಲ್ಲರು ಜಾತಿ ಹೆಸರಿನಲ್ಲಿ ಗುರುತಿಸಿಕೊಂಡಿದ್ದರು ಎಂದು ಹೇಳಿದರು.
ಮೌಢ್ಯವನ್ನು ದೂರ ಮಾಡುವ ಸಲುವಾಗಿ ಹುಟ್ಟು ಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿ ನಂತರ ಸಾಮೂಹಿಕ ಸಹಭೋಜನದಲ್ಲಿ ಎಲ್ಲರು ಭಾಗಿಯಾದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಅರವಿಂದ ವಾಲಗತ್ತಿ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಪ್ರಗತಿಪರ ಚಿಂತಕ ಪ್ರೊ.ಕಾಳಚನ್ನೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಹಾಗೂ ಇತರರು ಇದ್ದರು.