ಧಾರ್ಮಿಕ ಜ್ಞಾನ ವೃದ್ಧಿಗಾಗಿ ಭಗವದ್ಗೀತಾ ಡಿಪ್ಲೊಮಾ ಕೋರ್ಸ್

Geeta
Published on

ಸುಗುಣೇಂದ್ರ ತೀರ್ಥ ಶ್ರೀಪಾದರು ಮಾಹಿತಿ

ಗೀತಾಮೃತಸಾರ ಪಠ್ಯ ಪುಸ್ತಕ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಧಾರ್ಮಿಕ ಜ್ಞಾನದ ಕೊರತೆಯಿಂದಾಗಿಯೇ ಸಮಾಜದಲ್ಲಿ ಕೊಲೆ-ಸುಲಿಗೆ, ಅನ್ಯಾಯ ಹಾಗೂ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿದೆ. ಹೀಗಾಗಿ ಯುವಸಮುದಾಯ ಸನ್ಮಾರ್ಗದಲ್ಲಿ ಸಾಗುವಂತೆ ಪೂರಕವಾಗಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಭಗವದ್ಗೀತಾ ಡಿಪ್ಲೊಮಾ ಕೋರ್ಸ್​ ಪ್ರಾರಂಭಿಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಉಡುಪಿಯ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಪ್ಲೊಮಾ ಕೋರ್ಸ್​ನ ಪಠ್ಯ ಗೀತಾಮೃತಸಾರ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ನಿಟ್ಟೆ ವಿವಿಯಲ್ಲಿ ಆರಂಭ

ಪುತ್ತಿಗೆ ಮಠದ ಮಾರ್ಗದರ್ಶನದಲ್ಲಿ ನಿಟ್ಟೆ ವಿವಿಯ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರ (ಐಕೆಎಸ್​)ದಲ್ಲಿ ಡಿಸೆಂಬರ್​ನಿಂದ ಒಂದು ವರ್ಷ ಅವಧಿಯ ಗೀತಾ ಡಿಪ್ಲೊಮಾ ಕೋರ್ಸ್​ ಆರಂಭಗೊಳ್ಳಲಿದೆ. ಒಟ್ಟು ಐದು ಪತ್ರಿಕೆ ಇರಲಿದ್ದು, ಕೋರ್ಸ್​ನ ಪಾಠದ ವ್ಯವಸ್ಥೆ ಹಾಗೂ ಪರೀಕ್ಷೆಯೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆನ್​ಲೈನ್​ ಮೂಲಕವೇ ನಡೆಯಲಿದೆ. ಈ ಕೋರ್ಸ್​ ಮೂಲಕ ಕೃಷ್ಣಜ್ಞಾನ ಪಸರಿಸುವಂತಾಗಲಿ ಎಂದು ಹಾರೈಸಿದರು.

ನಿಟ್ಟೆ ವಿವಿಯ ಕುಲಪತಿ ಡಾ. ಎಂ.ಎಸ್​. ಮೂಡಿತ್ತಾಯ ಮಾತನಾಡಿ, ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಭಾರತೀಯ ಶಿಕ್ಷಣ ವ್ಯವಸ್ಥೆ, ಭಗವದ್ಗೀತಾ ಡಿಪ್ಲೊಮಾ ಕೋರ್ಸ್​ನ ಆವಶ್ಯಕತೆ ಹಾಗೂ ಹಿನ್ನೆಲೆ ವಿವರಿಸಿದರು. ಆಸಕ್ತರು ಮೊ.ಸಂ. 9945912075 ಸಂಪರ್ಕಿಸಬಹುದು ಎಂದರು.

ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಪುರಾತತ್ವದ ಖ್ಯಾತ ಶಾಸ್ತ್ರಜ್ಞ ಪದ್ಮಶ್ರೀ ಕೆ.ಕೆ. ಮೊಹಮ್ಮದ್​, ಟೆಂಪ್ಲೆಕ್ಸ್​ ಸಿಟಿ ಖ್ಯಾತ ಬರಹಗಾರ ಸುರೇಂದ್ರನಾಥ್​ ಬೊಪ್ಪರಾಜು, ಹಿರಿಯ ವಿದ್ವಾಂಸ ಪ್ರೊ. ಶ್ರೀಪತಿ ತಂತ್ರಿ ಉಡುಪಿ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ಸಂಚಾಲಕ ಪ್ರಸನ್ನ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​ ಉಪಸ್ಥಿತರಿದ್ದರು.

ನಿಟ್ಟೆ ವಿವಿಯ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರದ ನಿರ್ದೇಶಕ ಡಾ. ಸುಧೀರರಾಜ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್​ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net