ವಿದ್ಯಾರ್ಥಿ ದೆಸೆಯಿಂದಲೇ ಗೀತೆಯ ಸಾರ ಕಲಿಸಬೇಕು, ರಾಜಯೋಗಿ ಡಾ. ಬಸವರಾಜ ರಾಜಋಷಿ ಅಭಿಮತ

IMG-20231223-WA0026.jpg
Published on

ಹುಬ್ಬಳ್ಳಿ: ಜಗತ್ತಿನಲ್ಲಿ ಯಾವುದೇ ಧರ್ಮಗಳು ಉದಯಿಸುವ ಮೊದಲೇ ಭಾರತದಲ್ಲಿ ಭಗವದ್ಗೀತೆ ಹುಟ್ಟಿದೆ. ವಿಶ್ವ ಭ್ರಾತೃತ್ವ ಬೋಧಿಸಿದ ಇಂತಹ ಸನಾತನ ಧರ್ಮ ಇರುವ ದೇಶದಲ್ಲಿ ಹುಟ್ಟಿದ ನಾವೇ ಭಾಗ್ಯವಂತರು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯದ ನಿರ್ದೇಶಕ ರಾಜಯೋಗಿ ಡಾ. ಬಸವರಾಜ ರಾಜಋಷಿ ಹೇಳಿದರು.

ಇಲ್ಲಿಯ ಭೈರಿದೇವರಕೊಪ್ಪ ಗಾಮನಗಟ್ಟಿ ರಸ್ತೆಯಲ್ಲಿರುವ ಭಗವದ್ಗೀತಾ ಜ್ಞಾನಲೋಕ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀಮದ್ ಭಗವದ್ಗೀತಾ 5161ನೇ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.

ವಿಶ್ವಶ್ರೇಷ್ಠವಾದ ಭಗವದ್ಗೀತೆಯ ಸಂದೇಶಗಳನ್ನು ಭಾರತದ ಶಾಲೆ, ಕಾಲೇಜುಗಳಲ್ಲಿ ಕಲಿಸದೇ ಇರುವುದು ದುರದೃಷ್ಟಕರ ಸಂಗತಿ. ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು. ದೇಶದ ಸರ್ವಜನಾಂಗಕ್ಕೂ ಗೀತೆಯ ಸಾರವನ್ನು ತಲುಪಿಸಬೇಕು. ಭಾರತೀಯರು ಎಲ್ಲರೂ ಇದನ್ನು ಅರಿತಾಗ ಭಾರತದ ಪುನಶ್ಚೇತನ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಆಧುನಿಕ ಜೀವನ ಶೈಲಿ ಅಪ್ಪಿಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ಮೌಲ್ಯಗಳ ಧಾರಣೆ ಮಾಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗಾಗಿ ಗೀತೆಯ ಸಂದೇಶ ಎಲ್ಲ ಕಡೆ ತಲುಪಿಸಬೇಕು. ಸರ್ಕಾರಗಳು ಈ ಕೆಲಸ ಮಾಡದಿದ್ದರೂ ಭಾರತೀಯರಾದ ನಾವೆಲ್ಲರೂ ಸಾಮಾನ್ಯ ಜನರಿಗೆ ಇದನ್ನು ಮುಟ್ಟಿಸಬೇಕು ಎಂದು ಹೇಳಿದರು.

ಕಾವ್ಯಚೂಡಾಮಣಿ ಡಾ. ವೇಣಿಮಾಧವ ಶಾಸ್ತ್ರೀ ಬಿ. ಜೋಶಿ ಮಾತನಾಡಿ, ಮಹಾಭಾರತದ ಕಾಲದ ಬಗ್ಗೆ ಇದುವರೆಗೂ ಗೊಂದಲಗಳಿದ್ದವು. ಆದರೆ, ಸಂಶೋಧನೆಗಳ ಆಧಾರದಲ್ಲಿ ಇದೀಗ 5161ನೇ ಜಯಂತಿ ಎಂದು ಹೇಳುತ್ತಿರುವುದು ಸಂತಸದ ಸಂಗತಿ. ಮಹಾಭಾರತದ ಕಾಲದ ಬಗ್ಗೆ ಇದರಿಂದ ನಿಖರತೆ ಸಿಗುತ್ತದೆ ಎಂದರು.

ಶ್ರೀಕೃಷ್ಣ ಪರಮಾತ್ಮನೇ ಈಶ್ವರನ ಸ್ವರೂಪನೂ ಆಗಿದ್ದಾನೆ. ಚೈತನ್ಯ ಶಕ್ತಿಯಾಗಿದ್ದಾನೆ. ಜಗತ್ತಿನಲ್ಲಿ ಪರಮೋಚ್ಚ ಶಕ್ತಿ ಎಂಬುದು ಇದೆ ಎಂಬುದನ್ನು ಈಗಿನ ವಿಜ್ಞಾನಿಗಳು ಸಹ ಒಪ್ಪುತ್ತಾರೆ ಎಂದು ಹೇಳಿದರು.

ಹುಬ್ಬಳ್ಳಿಯ ವೇದಪೀಠದ ಡಾ. ಕಂಠಪಲ್ಲೀ ಸಮೀರಣಾಚಾರ್ಯರು, ವಿದ್ವಾನ್ ವಾಚಸ್ಪತಿ ಶಾಸ್ತ್ರಿ ಜೋಶಿ, ವಿದ್ವಾನ್ ಸೂರ್ಯನಾರಾಯಣ ಭಟ್, ಬಿ.ಕೆ. ಸ್ನೇಹಾ, ಬಿ.ಕೆ. ಶಾಂತಾ ನಂಬಿಯಾರ್, ಬಿ.ಕೆ. ವೀಣಾ ಅಡಿ, ಇತರರು ವಿವಿಧ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಸಂಚಾಲಕಿ ಬಿ.ಕೆ. ನಿರ್ಮಲಕ್ಕ ಅವರು ಸ್ವಾಗತಿಸಿದರು.

ರಾಜ್ಯಪಾಲರ ಸಂದೇಶ: ಈ ಮಹೋತ್ಸವದ ಉದ್ಘಾಟನೆಗೆ ಆಗಮಿಸಬೇಕಿದ್ದ ರಾಜ್ಯಪಾಲ ಥಾವರಚಂದ ಗೆಹ್ಲೋತ್ ಅವರು ಅನಿವಾರ್ಯ ಕಾರಣಗಳಿಂದ ಬರಲಿಲ್ಲ. ಅವರು ಕಳುಹಿಸಿದ ಸಂದೇಶವನ್ನು ಬಿತ್ತರಿಸಲಾಯಿತು. ವ್ಯಕ್ತಿಯಲ್ಲಿ ಪರಿವರ್ತನೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯವು ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿದೆ. ಜಗತ್ತಿನಲ್ಲಿ ಜಯಂತಿ ಆಚರಿಸಿಕೊಳ್ಳುವ ಏಕಮಾತ್ರ ಗ್ರಂಥ ಭಗವದ್ಗೀತೆಯಾಗಿದೆ. ಮನುಷ್ಯನನ್ನು ಮೋಕ್ಷದತ್ತ ಕೊಂಡೊಯ್ಯುವ ಪವಿತ್ರ ಗ್ರಂಥ ಇದಾಗಿದೆ. ಇದರ ಸಾರವನ್ನು ಜನರಿಗೆ ತಲುಪಿಸುವ ಕಾರ್ಯ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net