ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಗವದ್ಗೀತೆ ಪಾರಾಯಣ

Bhagavad Gita Parayana at Ganapati Satchidananda Ashram
Published on

ಮೈಸೂರು: ಭಗವದ್ಗೀತೆಯು ಸನಾತನ ಧರ್ಮದ ಪವಿತ್ರ ಗಂಥವಾಗಿದ್ದು, ಅತ್ಯಂತ ಮೌಲ್ಯವುಳ್ಳದ್ದಾಗಿದೆ ಎಂದು ನಗರದ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಭಾನುವಾರ ಹಮ್ಮಿಕೊಂಡ ಸಹಸ್ರಗಳ ಸಂಪೂರ್ಣ ಭಗವದ್ಗೀತಾ ಪಾರಾಯಣ ಮಹಾಯಜ್ಞದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು. ಪ್ರತಿ ದಿನ ಭಗವದ್ಗೀತೆಯ ಒಂದು ಅಧ್ಯಾಯ ಓದಬೇಕು ಅಥವಾ ಕನಿಷ್ಠಪಕ್ಷ ಒಂದು ಶ್ಲೋಕವನ್ನಾದರೂ ಪಠಣ ಮಾಡಬೇಕು, ಇದು ನಮ್ಮ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಆಡಂಬರಕ್ಕಾಗಿ ಗೀತೆಯನ್ನು ಓದಬಾರದು. ಭಕ್ತಿ, ಶ್ರದ್ಧೆಯಿಂದ ಪಾರಾಯಣ ಮಾಡಬೇಕು, ಯಾವುದೇ ವಿಷಯಾಸಕ್ತರಾಗದೆ ಭಕ್ತಿಯಿಂದ ಅಭ್ಯಾಸ ಮಾಡಬೇಕು. ಪರಮಾತ್ಮನನ್ನು ನಂಬಿದರೆ ಎಂದಿಗೂ ಕೇಡಾಗುವುದಿಲ್ಲ, ಆ ದೇವನನ್ನು ಎಲ್ಲರು ನಂಬಿ ಅವನಲ್ಲಿ ವಿಶ್ವಾಸವಿಡಬೇಕು ಎಂದರು.

ಕಷ್ಟವೇ ಬರಲಿ, ಸುಖವೇ ಬರಲಿ ವಿಚಲಿತರಾಗದೆ ಪರಮಾತ್ಮನನ್ನು ನಂಬಿ ಪ್ರಾರ್ಥನೆ ಮಾಡಬೇಕು. ದೇವರಲ್ಲಿ ವಿಶ್ವಾಸವಿಟ್ಟರೆ ದೇವರು ನಿಮ್ಮನ್ನು ರಕ್ಷಿಸುತ್ತಾನೆ. ಭಕ್ತಿ, ಶ್ರದ್ಧೆ, ವಿಶ್ವಾಸದಿಂದ ಗೀತ ಪಠಣ ಮಾಡಿದರೆ ಕಷ್ಟ, ಕ್ಲೇಶಗಳು, ಸಮಸ್ಯೆಗಳು ದೂರವಾಗುತ್ತವೆ. ಭಗವದ್ಗೀತೆಯನ್ನು ತೋರಿಕೆಗಾಗಿ ಅಧ್ಯನ ಮಾಡಿದರೆ ಪ್ರಯೋಜನವಿಲ್ಲ. ಅದರಲ್ಲಿ ಶ್ರೀ ಕೃಷ್ಣ ಬೋಧಿಸಿರುವುದನ್ನು ಮನನ ಮಾಡಿಕೊಂಡು ಅದರಂತೆ ನಡೆದುಕೊಳ್ಳಲು ಪ್ರಯತ್ನಿಸಬೇಕು. ಆಗ ಮಾತ್ರ ಪರಮಾತ್ಮ ಕೈಬಿಡದೆ ನಿಮ್ಮ ರಕ್ಷಣೆಗೆ ನಿಲ್ಲುತ್ತಾನೆ ಎಂದು ತಿಳಿಸಿದರು.

ನೀವಷ್ಟೇ ಅಲ್ಲ ಕನಿಷ್ಠ ಒಂದೈದು ಮಂದಿಗಾದರೂ ಗೀತೆಯ ಬಗ್ಗೆ ತಿಳಿಸಿಕೊಟ್ಟು ಅವರು ಸಹ ಭಗವದ್ಗೀತೆ ಓದುವಂತೆ ಪ್ರೇರೇಪಿಸಬೇಕು. ಈ ಮೂಲಕ ಗೀತೆಯ ಸಾರ ಜಗತ್ತಿನಾದ್ಯಂತ ಬೆಳೆಯುವಂತೆ ಆಗಬೇಕು. ಭಗವದ್ಗೀತೆ ಕಲಿತು ಪ್ರತಿ ನಿತ್ಯ ಪಠಣ ಮಾಡಿದರೆ ಭವಿಷ್ಯದಲ್ಲಿ ಒಳಿತಾಗುತ್ತದೆ. ಆಧ್ಯಾತ್ಮಿಕವಾಗಿ, ಶಾರೀರಿಕವಾಗಿ ಪ್ರಯೋಜನ್ವಾಗುತ್ತದೆ ಆನಂದ, ಮುಕ್ತಿ ಸಿಗುತ್ತದೆ ಎಂದು ಹೇಳಿದರು.

ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಭಗವದ್ಗೀತೆಯನ್ನ ಪೂಜೆ ಮಾಡಿ ಶೆಲ್ಫ್ ನಲ್ಲಿಟ್ಟರೆ ಪ್ರಯೋಜನವಿಲ್ಲ, ಪ್ರತಿ ದಿನ ಓದಬೇಕು. ಭಗವದ್ಗೀತೆ ಮನುಜರ ಜೀವನಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಕನಿಷ್ಠ ಪ್ರತಿ ದಿನ ಐದು ಮಂದಿಗಾದರೂ ಗೀತೆಯನ್ನು ತಿಳಿಸಿಕೊಡಬೇಕು. ಎಲ್ಲರೂ ಗೀತೆಯನ್ನು ಪ್ರಚಾರ ಮಾಡಬೇಕು ಎಂದರು.

3,600 ಜನರಿಂದ ಭಗವದ್ಗೀತೆ ಪಾರಾಯಣ: ಸಹಸ್ರಗಳ ಸಂಪೂರ್ಣ ಭಗವದ್ಗೀತಾ ಪಾರಾಯಣ ಮಹಾಯಜ್ಞಕ್ಕೆ ಇಂದು ಸಹಸ್ರಾರು ಭಕ್ತರು ಸಾಕ್ಷಿಯಾದರು. 1,600 ಮಂದಿ ಗೀತೆಯನ್ನು ಪಠ ಮಾಡಿದರೆ 2,000 ಮಂದಿ ಭಗವದ್ಗೀತೆ ಗ್ರಂಥ ನೋಡಿ ಸುಲಲಿತವಾಗಿ ಪಾರಾಯಣ ಮಾಡಿದರು. ಒಟ್ಟು 3,600 ಮಂದಿ ಏಕಕಾಲದಲ್ಲಿ ಭಗವದ್ಗೀತೆಯ ಪಾರಾಯಣ ಮಾಡಿದರು.

ನಾದಮಂಟಪದಲ್ಲಿ ಗೀತಾ ಪಾರಾಯಣ ನಡೆಯುವಾಗ ಶ್ರೀಗಳು ಪ್ರತಿ ಸಾಲಿಗೂ ಹೋಗಿ ಒಬ್ಬೊಬ್ಬರ ಮೇಲೂ ಪುಷ್ಪವೃಷ್ಟಿ ಮಾಡಿ ಆಶೀರ್ವದಿಸಿದ್ದು ವಿಶೇಷವಾಗಿತ್ತು. ಆಬಾಲವೃದ್ಧರಾದಿಯಾಗಿ ಎಲ್ಲರು ಪಾರಾಯಣದಲ್ಲಿ ಪಾಲ್ಗೊಂಡರು. ಗೀತೆಯನ್ನು ಪೂರ್ಣವಾಗಿ ಕಂಠಸ್ಥ ಮಾಡಿರುವ ಆರು ವರ್ಷದ ವಿಷ್ಣುದತ್ತ ಹಾಗೂ 75 ವರ್ಷದ ಎಸ್‌ವಿಪಿ ಸತ್ಯನಾರಾಯಣ ಮೂರ್ತಿ ಅವರನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಗೌರವಿಸಿದರು. ಈ ಸಂದರ್ಭ ಭಗವದ್ಗೀತೆಯನ್ನು ಪ್ರಚಾರ ಮಾಡುವುದಾಗಿ ಭಕ್ತರು ಪ್ರತಿಜ್ಞೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net