

ಭಟ್ಕಳ: ಹಿಂದು ಧರ್ಮದ ಪ್ರಮುಖ ಗ್ರಂಥ ಭಗವದ್ಗೀತೆ ಈಗ ಧರ್ಮವನ್ನು ಮೀರಿ ಜಾಗತಿಕವಾಗಿ ವ್ಯಕ್ತಿತ್ವ ವಿಕಸನ ಮತ್ತು ಪ್ರೇರಣೆ ಪಡೆದುಕೊಳ್ಳುವ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಶ್ನೆ, ಗೊಂದಲ ಮತ್ತು ಸಮಸ್ಯೆಗಳಿಗೆ ಭಗವದ್ಗೀತೆ ಉತ್ತರ ನೀಡುತ್ತದೆ ಎಂದು ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ ಹೇಳಿದರು.
ಗಜಾನನ ಗಣಪತಿ ಕೊಲ್ಲೆ ರಾಯ್ಕರ ಫೌಂಡೇಷನ್ ವತಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೂರನೇ ವರ್ಷದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಈ ವರ್ಷ 25 ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಿದ್ದು ಸುಮಾರು 150 ಶೈಕ್ಷಣಿಕ ಸಂಸ್ಥೆಗಳಿಂದ 1500 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರು.
ದಿ ನ್ಯೂಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶಾನಭಾಗ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗಣಪತಿ ಶಿರೂರು, ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಖಾರ್ವಿ ಮತ್ತು ವಿದ್ಯಾಂಜಲಿ ಪಬ್ಲಿಕ್ ಶಾಲೆ ಮುಖ್ಯೋಪಾಧ್ಯಾಯಿನಿ ಶೈಲಜಾ ಪ್ರಭು ಉಪಸ್ಥಿತರಿದ್ದರು.