

ಬೆಂಗಳೂರು: ನ್ಯಾಯ ಮತ್ತು ಧರ್ಮದ ಸಂಕೇತವೇ ಭಗವದ್ಗೀತೆ. ಇದನ್ನು ಪ್ರತಿಪಾದಿಸಿರುವ ಭಗವಾನ್ ಶ್ರೀಕೃಷ್ಣನ ಉಪದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ರಾಜೀವ್‌ಗಾಂಧಿ ಕಾನೂನು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಟಿ. ಮರಿಸ್ವಾಮಿಗೌಡ ಹೇಳಿದರು.
ಗೀತಾ ಜಯಂತಿ ನಿಮಿತ್ತ ನಗರದ ಕೋದಂಡರಾಮಪುರದ ರಾಜೀವ್‌ಗಾಂಧಿ ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ್ದ ಗೀತಾಸಾರಾಮೃತ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಕಲಿಯುಗದಲ್ಲಿ ಇಂದಿಗೂ ಕುಟುಂಬಗಳ ನಡುವೆ ಅಧಿಕಾರಕ್ಕಾಗಿ ಪರಸ್ಪರ ಕಲಹಗಳು ಮುಂದುವರಿದಿದೆ. ಅಂದು ರಾಜ್ಯಕ್ಕಾಗಿ ಕೌರವ ಮತ್ತು ಪಾಂಡವರ ಮಧ್ಯೆ ನಡೆದ ಯುದ್ಧದಲ್ಲಿ ಸಂಧಾನಕಾರನಾಗಿ ನಾರಾಯಣನು ಈ ಕೆಲಸವನ್ನು ನೆರವೇರಿಸಿದನು. ಇಂದಿನ ಆಧುನಿಕ ಪ್ರಪಂಚದಲ್ಲಿ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರು ಧರ್ಮ ಸಂರಕ್ಷಣೆಗಾಗಿ ಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ವ್ಯಾಖ್ಯಾನಿಸಿದರು.
ಶ್ಲೋಕಗಳಿಗೆ ತಿದ್ದುಪಡಿಗಳಿಲ್ಲ:
ಕಾಲೇಜಿನ ಪ್ರಾಂಶುಪಾಲೆ ಡಾ. ಬಿ.ಆರ್. ಮಂಜುಳಾ ಮಾತನಾಡಿ, ಆರು ಸಾವಿರ ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಜನ್ಯಗೊಂಡ 7 ಸಾವಿರಕ್ಕೂ ಅಧಿಕ ಶ್ಲೋಕಗಳು ಯಾವುದೇ ತಿದ್ದುಪಡಿಗಳಿಲ್ಲದೆ ಇಂದಿಗೂ ಪ್ರಸ್ತುತವಾಗಿದೆ. ಎಲ್ಲಿಯವರೆಗೆ ಶ್ರದ್ಧಾ ಭಕ್ತಿಯಿಂದ ಕಲಿಯುವ ಅರ್ಜುನಂತಹ ಚಿತ್ತಶಾಲಿಗಳಿರುತ್ತಾರೋ ಅಲ್ಲಿಯವರೆಗೂ ಕುರುಕ್ಷೇತ್ರದಂತಹ ಸಾಂಕೇತಿಕ ಸಮರಭೂಮಿ ನಿತ್ಯವೂ ನಮ್ಮ ಬದುಕಿನಲ್ಲಿ ಸೃಷ್ಟಿಯಾಗುತ್ತಲೇ ಇರುತ್ತದೆ. ಇಂತಹ ರಣರಂಗಕ್ಕೆ ಸಾಕ್ಷಿಯಾದ ಶ್ರೀಕೃಷ್ಣ, ಜೀವಕೋಟಿಯ ವಿವಿಧ ಮಜಲುಗಳ ಜ್ಞಾನದ ವಿಶ್ವರೂಪವನ್ನು ಅರ್ಜುನನಿಗೆ ತೋರಿದ ಮಹಾನುಭಾವ ಮತ್ತು ಅನಂತಸ್ವರೂಪಿ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಮನೋ ಆಧ್ಯಾತ್ಮಿಕ ಜ್ಞಾನಭಂಡಾರ ಪ್ರೊ. ಭಾಸ್ಕರ್, ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಚಂದ್ರಮೌಳಿ, ಪ್ರೊ. ಪ್ರಿಯಾ, ಪ್ರೊ. ವಿಜಯಲಕ್ಷ್ಮೀ ಉಪಸ್ಥಿತರಿದ್ದರು.