

ಹುಬ್ಬಳ್ಳಿ: ಭಗವದ್ಗೀತೆ ಜ್ಞಾನದ ಗಣಿ. ಅದನ್ನು ಎಲ್ಲರೂ ಪ್ರತಿ ನಿತ್ಯ ಓದಬೇಕು ಎಂದು ಹಿರಿಯ ವೈದ್ಯ ಹಾಗೂ ಚಿಂತಕ ಡಾ.ಆರ್.ಎನ್. ಜೋಶಿ ಅಭಿಪ್ರಾಯಪಟ್ಟರು.
ಇಲ್ಲಿಯ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಮೆಮೋರಿಯಲ್ ಪ್ರೌಢಶಾಲೆಯಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಗೀತಾ ಜಯಂತಿ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಭಗವದ್ಗೀತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಬದುಕಲು ಪ್ರಾಣವಾಯು ಎಷ್ಟು ಅಗತ್ಯವೋ ಬದುಕಿಗೆ ಅರ್ಥ ನೀಡಲು ಜ್ಞಾನವೂ ಅಷ್ಟೇ ಮುಖ್ಯ ಎಂದರು.
ಸಂಸ್ಥೆಯ ಖಜಾಂಚಿ ಕನಕಗಿರಿ ರಘೂತ್ತಮರಾವ್ ಮಾತನಾಡಿ, ಗೀತೆ ಪ್ರತಿ ನಿತ್ಯದ ಯಜ್ಞವಾಗಬೇಕು. ಮಕ್ಕಳೂ ಗೀತೆಯನ್ನು ತಪ್ಪದೇ ಓದಿ ಮನನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯದರ್ಶಿ ಸುದರ್ಶನ ಹೇಮಾದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ಎ.ಸಿ. ಗೋಪಾಲ, ವೀಣಾ ಶಿವರಾಮ ಹೆಗಡೆ, ಪ್ರಚಾರ ಸಮಿತಿಯ ಮನೋಹರ ಪರ್ವತಿ, ಶ್ರೀಕಾಂತ ಹೆಗಡೆ, ಟಿ.ಎಸ್. ಭಟ್, ಅಶೋಕ ಹೆಗಡೆ, ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಅನಿತಾ ಬಾಗಲಕೋಟೆ, ಎಂ.ಕೆ. ಹಿರೇಮಠ, ಪ್ರಮುಖರಾದ ಅರುಣಕುಮಾರ ಹಬ್ಬು, ಬಿಂದು ಮಾಧವ ಪುರೋಹಿತ ಇತರರು ಉಪಸ್ಥಿತರಿದ್ದರು. ಗೋಪಾಲಕೃಷ್ಣ ಹೆಗಡೆ ವಂದಿಸಿದರು. ಶಾಲೆಯ ಮಕ್ಕಳಿಂದ ಭಗವದ್ಗೀತೆಯ ಒಂಭತ್ತನೇ ಅಧ್ಯಾಯದ ಪಠಣ ನಡೆಯಿತು. ಅರವಿಂದ ಮುತ್ತಗಿ ನಿರೂಪಿಸಿ ಅತಿಥಿಗಳನ್ನು ಸ್ವಾಗತಿಸಿದರು.