

ವಿಜಯಪುರ: ಮನುಷ್ಯನ ಅಪಕ್ವತೆಯ ಮನಸ್ಸು ಇಂದು ವಿಕೃತಿಯತ್ತ ಸಾಗುತ್ತಿದೆ. ಭಯೋತ್ಪಾದನೆ, ಅತ್ಯಾಚಾರ, ಕೊಲೆ, ಸುಲಿಗೆ ಮುಂತಾದ ಭಯಂಕರವಾದ ಕೃತ್ಯಗಳನ್ನು ಮಾಡುತ್ತಿದೆ. ಇದನ್ನು ಕೊನೆಗಾಣಿಸಲು ಎಲ್ಲರೂ ಒಂದಾಗುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಸುಭದ್ರ ರಾಷ್ಟ್ರ ನಿರ್ಮಾಣ ಮಾಡಬೇಕಿದೆ ಎಂದು ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಭಗವದ್ಗೀತೆ ಅಭಿಯಾನ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಶಿರಸಿಯ ಸ್ವರ್ಣವಲ್ಲಿ ಮಹಾಸಂಸ್ಥಾನ ಮತ್ತು ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ಜಿಲ್ಲೆಯ ವಿವಿಧ ಶೈಕ್ಷಣಿಕ ಹಾಗೂ ಸಂಘ ಸಂಸ್ಥೆಗಳು ಹಾಗೂ ಭಕ್ತರ ಸಹಯೋಗದೊಂದಿಗೆ ಇದೇ ನ. 4 ರಿಂದ ಡಿ.12 ರವರೆಗೆ ವಿಜಯಪುರ ಜಿಲ್ಲೆಯಾದ್ಯಂತ ಭಗವದ್ಗೀತೆಯ 9ನೇ ಅಧ್ಯಾಯ ಕಂಠಪಾಠ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಭಗವದ್ಗೀತೆ ಅಭಿಯಾನದ ಮೂಲಕ ವ್ಯಕ್ತಿ ನಿರ್ಮಾಣ ಕಾರ್ಯ ನಿರಂತರವಾಗಿ ನಡೆಯಬೇಕೆಂಬ ಉದ್ದೇಶದಿಂದ ಈ ಅಭಿಯಾನವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳವರು ವಿದ್ಯಾರ್ಥಿಗಳನ್ನು ಇದರಲ್ಲಿ ಭಾಗವಹಿಸುವಂತೆ ಹಾಗೂ ಆಯೋಜಿಸಿರುವ ಗೀತಾ ಕಂಠಪಾಠ ಹಾಗೂ ಭಾಷಣ ಸ್ಪರ್ಧೆಗೆ ಮಕ್ಕಳನ್ನು ತಯಾರು ಮಾಡಬೇಕು ಎಂದರು.
ಚಿದಂಬರೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಲಕ್ಷ್ಮಿಕಾಂತ ಕಲಕರ್ಣಿ ಮಾತನಾಡಿ, ಭಗವದ್ಗೀತಾ ಕಂಠಪಾಠ ಅಭಿಯಾನವನ್ನು ಯಶಸ್ವಿಗೊಳಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ವೃದ್ಧಿಸೋಣ, ಅಭಿಯಾನದ ಮೂಲಕ ಸಂಸ್ಕಾರ ವೃದ್ಧಿಸಲು ಇದು ಸಹಕಾರಿಯಾಗಿದೆ. ಇದನ್ನು ಯಶಸ್ಸುಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಶಂಕರಭಟ ಅಗ್ನಿಹೊತ್ರಿ, ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ, ಶ್ರೀಹರಿ ಗೊಳಸಂಗಿ, ಮಾಧು ಜೋಶಿ, ಚಿದಂಬರೇಶ್ವರ ದೇವಸ್ಥಾನದ ಉಪಾಧ್ಯಕ್ಷ ಅಂಬಾದಾಸ ಜೋಶಿ, ವಿ.ಸಿ. ಕುಲಕರ್ಣಿ, ಚಿದಂಬರ ಪಾಟೀಲ, ರಾಘವೇಂದ್ರ ಜೋಶಿ, ವೆಂಕಟೇಶ ಜೋಶಿ, ಮುಕುಂದ ಹಂಗರಗಿ, ವಿಜಯ ಜೋಶಿ, ಸುಧೀಂದ್ರ ಕುಲಕರ್ಣಿ, ಉಪೇಂದ್ರ ದೇಸಾಯಿ, ಚಿದಂಬರ ಜೋಶಿ, ವೆಂಕಟೇಶ ಜೋಶಿ (ಹಡಲಗೇರಿ), ಸಚಿನಭಟ್ ಜೋಶಿ, ಪ್ರಾಣೇಶ ಕುಲಕರ್ಣಿ (ಸದಬ), ವಿಶ್ವನಾಥ ಕುಲಕರ್ಣಿ, ನ್ಯಾಯವಾದಿ ವೆಂಕಟೇಶ ಕುಲಕರ್ಣಿ, ಶ್ರೀಧರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಮಧುಸೂದನ ಜೋಶಿ, ಕೇಶವ ಕುಲಕರ್ಣಿ, ಪವನ ಕುಲಕರ್ಣಿ, ನಾಗರಾಜ ಜೋಶಿ, ಎ.ಡಿ. ಜೋಶಿ, ಮಯೂರ ಸಜ್ಜನ ಮತ್ತಿತರರಿದ್ದರು.