

ರಾಯಚೂರು: ಜಾತಿ ಪದ್ಧತಿ, ಕೋಮುವಾದದಂತ ಸಾಮಾಜಿಕ ಪಿಡುಗುಗಳ ವಿರುದ್ಧ ರಾಜಿರಹಿತ ಹೋರಾಟದ ಮೂಲಕ ಭಗತ್‌ಸಿಂಗ್ ದೇಶದಲ್ಲಿನ ಸಾಮಾಜಿಕ ವ್ಯವಸ್ಥೆಯ ಸಮಗ್ರ ಬದಲಾವಣೆಯ ಕನಸು ಕಂಡಿದ್ದರು ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಹಯ್ಯಳಪ್ಪ ಹೇಳಿದರು.
ಸ್ಥಳೀಯ ಭಗತ್‌ಸಿಂಗ್ ವೃತ್ತದಲ್ಲಿ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ರೈತ, ಕಾರ್ಮಿಕರ ನೇತೃತ್ವದಲ್ಲಿ ಹೋರಾಟ ನಡೆಯಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು ಎಂದರು.
ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಭಗತ್‌ಸಿಂಗ್ ಯಾವತ್ತೂ ಜೀವನದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ನಂಬಿದ ತತ್ತ್ವಕ್ಕಾಗಿ ಜೀವನ ಪರ್ಯಂತ ಹೋರಾಟ ನಡೆಸಿದರು. ಬ್ರಿಟಿಷರು ಗಲ್ಲಿಗೆ ಹಾಕುವಾಗ ನನ್ನನ್ನು ಗಲ್ಲಿಗೆ ಹಾಕಬಹುದು ನನ್ನ ವಿಚಾರಗಳನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇಂದು ದೇಶ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಬಿಕ್ಕಟ್ಟಿನಲ್ಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸಂಪೂರ್ಣವಾಗಿ ಖಾಸಗೀಕರಣವಾಗುತ್ತಿದದು, ಹಣ ಇದ್ದವರಿಗೆ ಮಾತ್ರ ಶಿಕ್ಷಣ, ಆರೋಗ್ಯ ಸಿಗುವಂತಾಗಿದೆ. ಎಲ್ಲರೂ ಒಗ್ಗೂಡಿ ಭಗತ್‌ಸಿಂಗ್ ಶೋಷಣೆ ರಹಿತ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಕ್ರಾಂತಿಕಾರಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಎಐಎಂಎಸ್‌ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸರೋಜಾ ಗೋನವಾರ್ ಅಧ್ಯಕ್ಷತೆ ವಹಿಸಿದ್ದರು. ಪದಾಕಾರಿಗಳಾದ ರುದ್ರಯ್ಯ ಗುಣಾರಿ, ಮಹೇಂದ್ರಸಿಂಗ್, ಸಂತೋಷ, ಬಸವರಾಜ, ವಿನೋದ, ಪೀರ್‌ಸಾಬ್, ಮಹೇಶ ಚೀಕಲಪರ್ವಿ, ಅಮೋಘ, ಮಧು ಉಪಸ್ಥಿತರಿದ್ದರು.