

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯವನ್ನು ಸರ್ಕಾರ ಕಡೆಗಣಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಆರೋಪಿಸಿದ್ದಾರೆ.
ಭಾಗಮಂಡಲಕ್ಕೆ ಗುರುವಾರ ಭೇಟಿ ನೀಡಿದ್ದ ಅವರು ದೇವಾಲಯ ಮತ್ತು ನೂತನ ಸೇತುವೆ ಕಾಮಗಾರಿ ಪರಿಶೀಲಿಸಿದರು.
ಕಾವೇರಿ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಸರ್ಕಾರ ಶ್ರೀ ಭಗಂಡೇಶ್ವರ ದೇವಾಲಯದ ನಿರ್ವಹಣೆಗೆ ಹೆಚ್ಚು ಒತ್ತು ನೀಡದೆ ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಭಾಗಮಂಡಲದ ಮೇಲ್ಸೇತುವೆ ನಿರ್ಮಾಣ ಕಾರ್ಯ ಒಂದಿಲ್ಲ ಒಂದು ಕಾರಣದಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯವಿದೆ. ತ್ರಿವೇಣಿ ಸಂಗಮದ ಸಮೀಪ ನಿರ್ಮಿಸಲಾಗಿರುವ ಶೌಚಾಲಯ ಅವೈಜ್ಞಾನಿಕ ಕಾಮಗಾರಿಯ ಕಾರಣದಿಂದ ಮುಚ್ಚಲ್ಪಟ್ಟಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮಕೈಗೊಂಡು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡಬೇಕು, ಆ ಮೂಲಕ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಬೇಕೆಂದು ಒತ್ತಾಯಿಸಿದರು.
ಮಠ-ಮಂದಿರಕ್ಕೆ ಸಾಕಷ್ಟು ಹಣ ನೀಡುತ್ತಿರುವ ರಾಜ್ಯ ಸರ್ಕಾರ ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯದ ಜನರಿಗೆ ಕಾವೇರಿ ನದಿ ನೀರನ್ನು ಒದಗಿಸುತ್ತಿರುವ ಕೊಡಗು ಜಿಲ್ಲೆಗೆ ಮತ್ತು ಕಾವೇರಿ ಉಗಮ ಸ್ಥಾನಕ್ಕೆ ಅನುದಾನ ನೀಡದೆ ಇರುವುದು ಖಂಡನೀಯ. ಸರ್ಕಾರದ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಅಧಿಕಾರಿಗಳು ಸರ್ಕಾರದೊಂದಿಗೆ ಚರ್ಚಿಸಿ ಜೀವನದಿ ಕಾವೇರಿ ಅಭಿವೃದ್ಧಿಗೆ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಮುಜರಾಯಿ ಸಚಿವರ ಗಮನಕ್ಕೆ ತರಲಾಗುವುದು ಮತ್ತು ಜಿಲ್ಲಾಧಿಕಾರಿಗಳ ಬಳಿಯೂ ಚರ್ಚಿಸುವುದಾಗಿ ತಿಳಿಸಿದರು. ವ್ಯವಸ್ಥಾಪನಾ ಸಮಿತಿ ಇಲ್ಲವೆಂದು ಕಾರಣ ನೀಡಿ ದಿನ ದೂಡುವ ಬದಲು ಎಲ್ಲರನ್ನು ಒಗ್ಗೂಡಿಸಿ ನೂತನ ಸಮಿತಿ ರಚಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ತಲಕಾವೇರಿ ಕ್ಷೇತ್ರದ ತಕ್ಕಮುಖ್ಯಸ್ಥ ಕೋಡಿ ಮೋಟಯ್ಯ ಮಾತನಾಡಿ, ಸಿಬ್ಬಂದಿ ವೇತನಕ್ಕೆ ತಿಂಗಳಿಗೆ ರೂ.೪,೭೨,೫೫೨ ಮತ್ತು ಭವಿಷ್ಯನಿಧಿಗೆ ೮೮,೬೨೭ ರೂಪಾಯಿ ಅಗತ್ಯವಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ. ಆದರೆ, ಮಳೆಗಾಲದಲ್ಲಿ ತೊಂದರೆ ಎದುರಾಗಲಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಕಾವೇರಿ ತುಲಾಸಂಕ್ರಮಣಕ್ಕೆ ಭಾಗಮಂಡಲ ಗ್ರಾಪಂಗೆ ೧ ಕೋಟಿ ರೂಪಾಯಿ ಅನುದಾನ ಬಂದಿದೆ. ಆದರೆ, ದೇವಾಲಯಕ್ಕೆ ಯಾವುದೇ ಹಣ ದೊರೆತ್ತಿಲ್ಲ, ವಾಹನ ನಿಲುಗಡೆ ಹಣ ಕೂಡ ಗ್ರಾಪಂ ಪಾಲಾಗುತ್ತಿದ್ದು, ಇದನ್ನು ದೇವಾಲಯಕ್ಕೂ ಹಂಚಿಕೆ ಮಾಡಬೇಕೆಂದು ಮನವಿ ಮಾಡಿದರು. ದೇವಾಲಯದ ಪಾರುಪತ್ತೆದಾರ ಪೊನ್ನಣ್ಣ, ಸ್ಥಳೀಯರಾದ ಕುಟ್ಟಪ್ಪ, ಹಾರಿಸ್, ಸುನೀಲ್ ಪತ್ರವೊ ಮತ್ತಿತರರು ಇದ್ದರು.