

ಮಡಿಕೇರಿ: ಭಾಗಮಂಡಲದಲ್ಲಿ ರೈತ ಉತ್ಪಾದನಾ ಸಂಸ್ಥೆಯ ಗೋದಾಮು ಸಂಗ್ರಹಣಾ ಕೇಂದ್ರ ಮಾರಾಟ ಮಳಿಗೆ ನಿರ್ಮಾಣಕ್ಕೆ ೨೭.೫೨ ಲಕ್ಷ ರೂಪಾಯಿ ಮೊತ್ತದ ಚೆಕ್‌ನ್ನು ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಹಸ್ತಾಂತರಿಸಿದರು. ತೋಟಗಾರಿಕೆ ಇಲಾಖೆಯಿಂದ ಮಂಜೂರಾಗಿರುವ ಅನುದಾನದ ಚೆಕ್ ಅನ್ನು ಶುಕ್ರವಾರ ಮಡಿಕೇರಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಕೋಡಿ ಪೊನ್ನಪ್ಪ ಅವರಿಗೆ ನೀಡಿದರು.
ರೈತರು ಕೃಷಿ ಉತ್ಪನ್ನ ಮಾರಾಟ ಮಾಡಲು ಹಾಗೂ ಕೃಷಿಗೆ ಬೇಕಾದ ಗೊಬ್ಬರ, ಸಲಕರಣೆ ಒದಗಿಸಲು ಸ್ವಾಯತ್ತ ಸಂಘ ಸ್ಥಾಪಿಸಲು ಸರ್ಕಾರ ತೋಟಗಾರಿಕೆ ಇಲಾಖೆ ಮೂಲಕ ಆರ್ಥಿಕ ನೆರವು ನೀಡುತ್ತಿದೆ ಎಂದು ಕೆ.ಜಿ. ಬೋಪಯ್ಯ ಹೇಳಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿ.ಎಂ. ಪ್ರಮೋದ್ ಮಾತನಾಡಿ, ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆಯನ್ನು ಕಂಪನಿ ಕಾಯ್ದೆಯಡಿ ೨೦೧೬ನೇ ಇಸವಿಯಲ್ಲಿ ಸ್ಥಾಪಿಸಲಾಗಿದೆ. ೧,೦೪೦ ರೈತರನ್ನು ಸಂಸ್ಥೆಯಲ್ಲಿ ನೋಂದಣಿ ಮಾಡಲಾಗಿದೆ ಎಂದು ಹೇಳಿದರು.
ಸಂಸ್ಥೆಯು ರೈತರಿಂದ ತೋಟಗಾರಿಕೆ ಉತ್ಪನ್ನ ಖರೀದಿಸಿ, ಸಂಸ್ಥೆ ಹೆಸರಿನಲ್ಲಿ ಬ್ರಾಂಡ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ರೈತರಿಗೆ ಬೇಕಾಗುವ ಗೊಬ್ಬರ, ಕ್ರಿಮಿನಾಶಕ ನೀಡಲಾಗುತ್ತಿದೆ. ಸಿಂಗತ್ತೂರು ಗ್ರಾಮದ ಸರ್ವೆ ನಂಬರ್ ೨೫/೩ ರಲ್ಲಿ ೦.೫೦ ಎಕರೆ ಸ್ವಂತ ಜಮೀನು ಹೊಂದಿದೆ ಎಂದರು.
ಸಂಸ್ಥೆ ಉಪಾಧ್ಯಕ್ಷ ಬಿ.ಎಂ. ಕಿಶೋರ್, ನಿರ್ದೇಶಕರಾದ ಡಿ.ಎಸ್. ಹರ್ಷ, ಪಿ.ಸಿ. ವಿಠಲ, ಕೆ.ಯು. ನಾಗೇಂದ್ರ, ವ್ಯವಸ್ಥಾಪಕ ಬಿ.ಎಸ್. ಬಿನ್ನಿ, ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಮತ್ತಿತರರು ಇದ್ದರು.