ಅಪಘಾತದಲ್ಲಿ ಭದ್ರಾವತಿಯ ಇಬ್ಬರು ಸಾವು

images
Published on

ಭದ್ರಾವತಿ: ಶುಕ್ರವಾರ ಸಂಜೆ ತುಮಕೂರು ಜಿಲ್ಲೆಯ ಶಿರಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಭದ್ರಾವತಿಯ ಟೆಂಪೋ ಟ್ರಾವಲರ್ ಚಾಲಕ ಹಾಗೂ ವೃದ್ಧೆ ಮೃತಪಟ್ಟಿದ್ದಾರೆ. ಹುಡ್ಕೋ ಕಾಲನಿ ನಿವಾಸಿ ಸಂತೋಷ್ ಆಚಾರ್(42) ಹಾಗೂ ಕಾಗೇಹಳ್ಳ ಗ್ರಾಮದ ಸರೋಜಮ್ಮ(82) ಮೃತರು.

ಕಾಗೇಹಳ್ಳಿ ಗ್ರಾಮದ ಸರೋಜಮ್ಮ ಮೊಮ್ಮಗಳಿಗೆ ಇತ್ತೀಚೆಗೆ ತುಮಕೂರು ಮೂಲದ ಯುವಕನ ಜತೆ ನಿಶ್ಚಿತಾರ್ಥವಾಗಿತ್ತು. ಶುಕ್ರವಾರ ಸರೋಜಮ್ಮ ಕುಟುಂಬದವರು ಟೆಂಪೋ ಟ್ರಾವಲರ್ ಬಾಡಿಗೆ ಪಡೆದು ಬಸಲೀಕಟ್ಟೆ-ಸಿದ್ದಾಪುರ ಗ್ರಾಮದಿಂದ ತುಮಕೂರಿನಲ್ಲಿರುವ ವರನ ಮನೆಗೆ ತೆರಳಿದ್ದರು. ವರನ ಮನೆಯಲ್ಲಿ ಶಾಸ್ತ್ರ ಮುಗಿಸಿ ಭದ್ರಾವತಿಗೆ ಹಿಂದಿರುಗುವ ವೇಳೆ ಸಂಜೆ ಶಿರಾ ಬಳಿ ಟೆಂಪೋ ಟ್ರಾವಲರ್ ಪಂಚರ್ ಆಗಿದೆ. ಟಯರ್ ಬದಲಿಸಲು ಚಾಲಕ ವಾಹನದಲ್ಲಿದ್ದ 10 ಜನರನ್ನು ಕೆಳಗಿಳಿಸಿದ್ದು, ವಯಸ್ಸಾಗಿದ್ದ ವೃದ್ಧೆಯನ್ನು ವಾಹನದಲ್ಲೇ ಕೂರಿಸಿದ್ದಾರೆ. ಟಯರ್ ಬದಲಾಯಿಸುವ ವೇಳೆ ಹಿಂದಿನಿಂದ ಬಂದು ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಚಾಲಕ ಹಾಗೂ ವಾಹನದಲ್ಲಿದ್ದ ವೃದ್ಧೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಸಂತೋಷ್ ಆಚಾರ್‌ಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಅಂತ್ಯಕ್ರಿಯೆ ಶನಿವಾರ ಸಂಜೆ ಬುಳ್ಳಾಪುರ ಬೈಪಾಸ್ ರಸ್ತೆಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net