ಮಾತು ಕೇಳದ ಪತ್ನಿ ಮೇಲೆ ಆಸಿಡ್ ಎರಚಿದ ಪತಿ

acid
Published on

ಶಿವಮೊಗ್ಗ: ಭದ್ರಾವತಿ ತಾಲೂಕಿನ ಬಿಆರ್‌ಪಿ ಸಮೀಪದ ಗ್ರಾಮದಲ್ಲಿ ತನ್ನ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಪತ್ನಿ ಮೇಲೆ ಪತಿಯೇ ಆಸಿಡ್ ಎರಚಿದ್ದು ಗಾಯಗೊಂಡಿರುವ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿ ಎಂಬಾತ ಕೃತ್ಯ ಎಸಗಿದವ. ಈತ ತನ್ನ ಜತೆ ಬರಲು ನಿರಾಕರಿಸಿದಳು ಎಂಬ ಕಾರಣಕ್ಕೆ ಆಸಿಡ್ ದಾಳಿ ನಡೆಸಲಾಗಿದೆ.

12 ವರ್ಷಗಳ ಹಿಂದೆ ತನ್ನದೇ ಗ್ರಾಮದ ಯುವತಿಯನ್ನು ರವಿ ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳಿದ್ದು ಹಲವು ವರ್ಷಗಳ ಹಿಂದೆ ಸಂಸಾರದಲ್ಲಿ ವೈಮನಸ್ಸು ಉಂಟಾಗಿ ದೂರವಾಗಿದ್ದರು. ರವಿ ತುಮಕೂರಿಗೆ ಪುತ್ರನೊಂದಿಗೆ ತೆರಳಿದ್ದರೆ, ಇತ್ತ ಇಬ್ಬರು ಹೆಣ್ಣು ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು ಪತ್ನಿ ಬೆಂಗಳೂರಿನಲ್ಲಿ ಗಾರ್ಮೆಟ್ಸ್‌ಗೆ ಸೇರಿದ್ದಳು. ಆಗಾಗ್ಗೆ ತಾಯಿ ಮನೆಗೆ ಬಂದು ಹೋಗುತ್ತಿದ್ದಳು.

ಎರಡು ದಿನದ ಹಿಂದೆ ರವಿ ಗ್ರಾಮಕ್ಕೆ ಮರಳಿದ್ದು, ಆತನ ಪತ್ನಿಯೂ ಬೆಂಗಳೂರಿನಿಂದ ಬಂದಿದ್ದಳು. ಈ ವೇಳೆ ಗಾರ್ಮೆಟ್ಸ್ ಕೆಲಸ ಬಿಟ್ಟು ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದ. ಆತನೊಂದಿಗೆ ತೆರಳಲು ನಿರಾಕರಿಸಿದ್ದಕ್ಕೆ ಆಸಿಡ್ ಎರಚಿದ್ದಾನೆಂದು ದೂರಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net